ವಿಶ್ವದ ಪ್ರಜಾಪ್ರಭುತ್ವ ವ್ಯವಸ್ಥೆಯ ರೂವಾರಿ ಮಹಾತ್ಮ ಬಸವೇಶ್ವರ

ಕಲಬುರಗಿ: ಎ.24:ಹನ್ನೆರಡನೇ ಶತಮಾನದಲ್ಲಿಯೇ ಜಾತಿ, ವರ್ಗ, ವರ್ಣ ರಹಿತ, ಸರ್ವ ಸಮಾನತೆ ಒಳಗೊಂಡ ಕಲ್ಯಾಣ ರಾಷ್ಟ್ರದ ನಿರ್ಮಿಸಿ, ಅನುಭವ ಮಂಟಪವನ್ನು ಸ್ಥಾಪಿಸಿ ಸರ್ವರಿಗೂ ಸಮಾನತೆ ಕಲ್ಪಿಸುವ ಮೂಲಕ ವಿಶ್ವದ ಪ್ರಥಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದ ಕೀರ್ತಿ ಮಹಾತ್ಮ ಬಸವೇಶ್ವರರಿಗೆ ಸಲ್ಲುತ್ತದೆ. ಬಸವಾದಿ ಶರಣತ ತತ್ವಗಳ ಅಳವಡಿಕೆಯಿಂದ ದೇಶ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಸಮಾನತೆ ಬರಲು ಸಾಧ್ಯವಾಗುತ್ತದೆ ಎಂದು ಗುವಿವಿ ಅತಿಥಿ ಉಪನ್ಯಾಸಕ, ಚಿಂತಕ ಡಾ.ಅನೀಲಕುಮಾರ ಟೆಂಗಳಿ ಅಭಿಮತಪಟ್ಟರು.

     ಯುವ ರಾಷ್ಟ್ರೀಯ ಬಸವ ದಳದ ವತಿಯಿಂದ 890ನೇ ಬಸವ ಜಯಂತಿ ಪ್ರಯುಕ್ತ ನಗರದ ಸುಪರ್ ಮಾರ್ಕೆಟ್‍ನಲ್ಲಿ ಭಾನುವಾರ ಸಂಜೆ ಏರ್ಪಡಿಸಲಾಗಿದ್ದ ಭಹಿರಂಗ ಸಭೆಯ 'ವಿಶ್ವ ಸಂವಿಧಾನ, ವಚನ ಚಳುವಳಿ ಹಾಗೂ ಭಾರತ ಸಂವಿಧಾನ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.

ದೇಶದ ಸಂವಿಧಾನ ಮತ್ತು ಶರಣರ ತತ್ವಗಳಲ್ಲಿ ಬಹಳಷ್ಟು ಸಾಮ್ಯತೆಯಿದೆ. ಮನುವಾದ ಮತ್ತು ಶೋಷಿತರ ಮೇಲಾಗುತ್ತಿದ್ದ ಶೋಷಣೆಯ ವಿರುದ್ದವಾಗಿ ರೂಪುಗೊಂಡಿದ್ದೇ ವಚನ ಚಳುವಳಿ. ಬುದ್ಧ-ಬಸವ-ಡಾ.ಅಂಬೇಡ್ಕರ್ ಅವರನ್ನು ಕೇವಲ ಉತ್ಸವ ಮೂರ್ತಿಗಳನ್ನಾಗಿಸಬೇಡಿ, ಅವರ ತತ್ವಗಳು ಹೃದಯದಲ್ಲಿ ಬೆರೆಯಬೇಕಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಇಂದಿಗೂ ಕೂಡಾ ಈ ಮಹನೀಯರ ತತ್ವ ನಮ್ಮ ದೇಶವನ್ನಾಳದೆ, ಮನುವಾದಿ ತತ್ವ ಅಘೋಷಿತವಾಗಿ ಚಲಾವಣೆಯಲ್ಲಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

   ದಿಕ್ಸುಚಿ ಭಾಷಣ ಮಾಡಿದ ಬಾಮಸೆಫ್‍ನ ರಾಜ್ಯ ಸಂಚಾಲಕ ರಾಜೇಶ ಬಡಿಗೇರ್, ಬಸವ ತತ್ವ ವಿಶ್ವ ಮಾನ್ಯವಾಗಿದ್ದು, ಅದರ ಬಗ್ಗೆ ಇನ್ನೂ ಜನಜಾಗೃತಿಯ ಅವಶ್ಯಕತೆಯಿದೆ. ಬಸವೇಶ್ವರರ ನಿಖರವಾದ ಜನ್ಮದಿನಾಂಕದ ಬಗ್ಗೆ ಸಂಶೋಧನೆ ಜರುಗಬೇಕು. ಲಿಂಗಾಯತ ಧರ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಬಸವೇಶ್ವರರು ಸ್ಥಾಪಿಸಿದ್ದು, ಅದಕ್ಕೆ ಕಾನೂನಿನ ಮಾನ್ಯತೆಯನ್ನು ನೀಡಿ 'ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ' ಎಂದು ಘೋಷಿಸಬೇಕು. ಇದಕ್ಕೆ ಬಾಮಸೆಫ್ ಸಂಪೂರ್ಣವಾಗಿ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಗದೀಶ ಡಿ.ಪಾಟೀಲ, ಉದಯಕುಮಾರ ಜೆ.ಸಾಲಿಮಠ, ಜಗನಾಥ ರಾಚೋಟಿ, ಅಂಬಾರಾಯ ಬಿರಾದಾರ, ಡಾ.ಸುನೀಲಕುಮಾರ ಎಚ್.ವಂಟಿ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ನೀಲಕಂಠಯ್ಯ ಹಿರೇಮಠ, ನಾಗಭೂಷಣ ಅಗಸ್ಥ್ಯತೀರ್ಥ, ರಾಜಕುಮಾರ ಕೋಟಿ, ಶಿವಶರಣಪ್ಪ ಕೋಳಾರ, ವೀರೇಶ ಮಲಿಪಾಟೀಲ್, ಮಲ್ಲಿಕಾರ್ಜುನ ಜೆ.ಬಗಲಿ, ಶಂಕರಗೌಡ ಪಾಟೀಲ, ಶಿವಾನಂದ ಪಾಟೀಲ, ಶಿವಯೋಗಪ್ಪ ಬಿರಾದಾರ ಬಾಳ್ಳಿ, ರೇವಣಸಿದ್ದಪ್ಪ ನಾಗೋಜಿ, ಸಿದ್ದಾರೂಡ ಬಿರಾದಾರ, ಗುರುಬಸಪ್ಪ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.