ವಿಶ್ವದ ಎಲ್ಲಾ ಮಹಿಳೆಯರಿಗೂ ಮಾದರಿಯ ಪ್ರತೀಕ ಒನಕೆ ಓಬವ್ವ”

ಚಿತ್ರದುರ್ಗ.ನ.13: ಪರಾಕ್ರಮಶಾಲಿಯಾದ ವೀರವನಿತೆ ಒನಕೆ ಓಬವ್ವ ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೇ ಇಡೀ ವಿಶ್ವದಲ್ಲಿರುವ ಎಲ್ಲ ಮಹಿಳೆಯರಿಗೂ ಮಾದರಿಯಾಗಿ, ಉದಾಹರಣೆಯಾಗಿ ತಿಳಿಸುವ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ ಎಂದು ದಿವ್ಯಪ್ರಭು ಜಿ.ಆರ್.ಜೆ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಒನಕೆ ಓಬವ್ವ ಜಯಂತಿಯನ್ನು ಇಂದು ಸಾಂಕೇತಿಕವಾಗಿ ಹಾಗೂ ಸರಳವಾಗಿ ಆಚರಿಸಲಾಗುತ್ತಿದೆ. ವೀರವನಿತೆ ಒನಕೆ ಓಬವ್ವ ಅವರ ಚರಿತ್ರೆ ನಮಗೆ ತಿಳಿದಿದೆ. ಆದರೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ಒನಕೆ ಓಬವ್ವ ಅವರನ್ನೂ ಹೇಗೆ ಉದಾಹರಣೆಯಾಗಿ ತೋರಿಸಬೇಕಿದೆ ಎಂಬುದರ ಬಗ್ಗೆ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ. ಒನಕೆ ಓಬವ್ವ ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ ಎಂದು ಹೇಳಿದರು. ಪರಾಕ್ರಮಿ, ವೀರನಾರಿಯರ ಬಗ್ಗೆ ನಾವು ಇತಿಹಾಸದಿಂದ ಓದಿ ತಿಳಿದಿದ್ದೇವೆ. ಆದರೆ ಒನಕೆ ಓಬವ್ವರ ವಿಶೇಷತೆ ಏನು ಎಂಬುದನ್ನು ಯೋಚಿಸಬೇಕಿದೆ. ಚಿತ್ರದುರ್ಗ ಎಂದರೆ ಕೋಟೆ, ಕೋಟೆ ಎಂದರೆ ಒನಕೆ ಓಬವ್ವ. ದುರ್ಗ ಎಂಬುದು ಮಹಿಳೆಯ ಶಕ್ತಿಯ ಸ್ವರೂಪ. ಹೆಣ್ಣು ಮಕ್ಕಳು ಶಕ್ತಿಶಾಲಿಗಳಾಗಿದ್ದು, ಮನೆ, ಕಚೇರಿ, ಕುಟುಂಬದ ಜವಾಬ್ದಾರಿ ಸೇರಿದಂತೆ ಆರ್ಥಿಕ ಪರಿಸ್ಥಿತಿ ಸೇರಿದಂತೆ ಎಲ್ಲವನ್ನೂ ನಿರ್ವಹಣೆ ಮಾಡುವ ಶಕ್ತಿ ನೈಸರ್ಗಿಕವಾಗಿ ಮಹಿಳೆಗೆ ಇದೆ. ಆ ಶಕ್ತಿಯಿಂದಲೇ ಒನಕೆ ಓಬವ್ವ ಅವರು ಸಮಯ ಪ್ರಜ್ಞೆಯಿಂದ ಕೋಟೆ ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಸೇರದಿಂತೆ ಅನೇಕ ವೀರನಾರಿಯರು ಇದ್ದಾರೆ. ಈ ಮಹಿಳೆಯರಿಗೆ ಸಂಸ್ಥಾನದಲ್ಲಿ ಪ್ರಾತಿನಿಧ್ಯವೂ ಮತ್ತು ತರಬೇತಿಯೂ ಇತ್ತು. ಆದರೆ ವೀರವನಿತೆ ಒನಕೆ ಓಬವ್ವ ಮನೆಕೆಲಸ ಮಾಡುತ್ತಾ, ಯುದ್ಧದ ಬಗ್ಗೆ ಯಾವುದೇ ಪರಿವೇ ಇಲ್ಲದೇ, ಕೇವಲ ಸಮಯ ಪ್ರಜ್ಞೆ ಹಾಗೂ ಧೈರ್ಯದಿಂದ ಕೋಟೆಯನ್ನು ರಕ್ಷಿಸಿದರು. ಒನಕೆ ಓಬವ್ವರ ಧೈರ್ಯವನ್ನು ಹೆಚ್ಚು ಪ್ರಚಲಿತಗೊಳಿಸಿ, ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು ಎಂದರು. ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ, ವೀರ ಮಹಿಳೆ ಒನಕೆ ಓಬವ್ವ ಚಿತ್ರದುರ್ಗ ಭೂಪಟದಲ್ಲಿ ಎಂದಿಗೂ ಅಜರಾಮರ. ಕೋಟೆಯ ಮುತ್ತಿಗೆಯ ಸಂದರ್ಭದಲ್ಲಿ ಓಬವ್ವ ಸಮಯ ಪ್ರಜ್ಞೆಯಲ್ಲಿ ಬಹಳ ಪ್ರಮುಖವಾಗಿದ್ದು, ಕೈಗೆ ಸಿಕ್ಕ ಒನಕೆಯಿಂದ ಕೋಟೆ ರಕ್ಷಿಸಿರುವುದು ಬಹಳ ರೋಮಾಂಚನಕಾರಿ ಸಂಗತಿ ಎಂದರು. ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಒನಕೆ ಓಬವ್ವ ಅವರ ಆದರ್ಶಗಳು ನಮಗೆ ಬೆಳಕಾಲಿ ಎಂದು ಆಶಯ ವ್ಯಕ್ತಪಡಿಸಿದರು. ಛಲವಾದಿ ಸಮಾಜದ ಮುಖಂಡರಾದ ಹೆಚ್.ಸಿ. ನಿರಂಜನಮೂರ್ತಿ ಮಾತನಾಡಿ, ಸರ್ಕಾರದಿಂದ ಪ್ರಥಮಬಾರಿಗೆ ರಾಜ್ಯಾದ್ಯಂತ ವೀರ ಒನಕೆ ಜಯಂತಿ ಆಚರಿಸಲಾಗುತ್ತಿದೆ. ಚಿತ್ರದುರ್ಗ ಕೋಟೆಯೊಳಗೆ ಕಳ್ಳಗಿಂಡಿಯಿAದ ನುಗ್ಗುತ್ತಿದ್ದ ಹೈದರಾಲಿಯ ಸೈನ್ಯವನ್ನು ಯಾವ ಶಸ್ತç ಅಭ್ಯಾಸ ವಿಲ್ಲದೇ ಸಮಯ ಪ್ರಜ್ಞೆಯಿಂದ ಕೇವಲ ಒನಕೆಯಿಂದ ಸದೆಬಡೆದು ಮದಕರಿ ನಾಯಕನ ಕೋಟೆ ರಕ್ಷಿಸುವಲ್ಲಿ ಓಬವ್ವ ಪ್ರಮುಖ ಪಾತ್ರ ವಹಿಸಿದ್ದರು. ಇದೇ ನವೆಂಬರ್ 27ಕ್ಕೆ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಆಚರಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ತಹಶೀಲ್ದಾರ್ ಸತ್ಯನಾರಾಯಣ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಛಲವಾದಿ ಸಮಾಜದ ಮುಖಂಡರಾದ ಗುರುಮೂರ್ತಿ, ಅಣ್ಣಪ್ಪ, ಗುರುಸ್ವಾಮಿ, ಯಶ್ವಂತ್ ಕುಮಾರ್, ರವಿಕುಮಾರ್, ದಯಾನಂದ್, ಹಾಲೇಶ್ ಭಾರ್ಗವಿ ದ್ರಾವಿಡ, ನವೀನ್ ಸೇರಿದಂತೆ ಮತ್ತಿತರರು ಇದ್ದರು.