ವಿಶ್ವದ ಅಭಿವೃದ್ಧಿಯಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಪಾತ್ರ ಅನನ್ಯ

ಕಲಬುರಗಿ: ಮೇ.8:ಸಮಾಜದಲ್ಲಿ ಕಂಡುಬರುವ ವಿವಿಧ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಶ್ರಮ, ನೈಸರ್ಗಿಕ ವಿಪತ್ತುಗಳ ನಿರ್ವಹಣೆ, ಜನಜಾಗೃತಿ ಕಾರ್ಯಕ್ರಮ, ತೊಂದರೆಯಲ್ಲಿರುವ ಜನರಿಗೆ ಸಹಾಯ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ನಿರಂತರವಾಗಿ ಮಾಡುವ ಮೂಲಕ ರೆಡ್‍ಕ್ರಾಸ್ ಸಂಸ್ಥೆಯು ರಾಷ್ಟ್ರ ಸೇರಿದಂತೆ ವಿಶ್ವದ ಅಭಿವೃದ್ಧಿಗೆ ತನ್ನದೇ ಆದ ಅನನ್ಯವಾದ ಕೊಡುಗೆಯನ್ನು ನೀಡುವ ಮೂಲಕ ಪ್ರಮುಖ ಪಾತ್ರ ವಹಿಸಿದೆ ಎಂದು ರೆಡ್ ಕ್ರಾಸ್ ಯುವ ಘಟಕದ ಕೌನ್ಸಲರ್ ಜಯಪ್ರಕಾಶ ಕಟ್ಟಿಮನಿ ಹೇಳಿದರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ವಿಶ್ವ ರೆಡ್‍ಕ್ರಾಸ್ ಸಂಸ್ಥೆ ದಿನಾಚರಣೆ’ಯನ್ನು ಸಂಸ್ಥೆಯ ಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಆಜೀವ ಸದಸ್ಯ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಶಾಂತಿ ಕಾಪಾಡುವುದು, ಗಾಯಗೊಂಡ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವುದು, ಆಕಸ್ಮಿಕ ಮರಣದ ಪ್ರಮಾಣವನ್ನು ತಗ್ಗಿಸುವುದು, ಸಮುದಾಯದ ಅಭಿವೃದ್ಧಿಯಲ್ಲಿ ತೊಡಗುವ ಮೂಲಕ ಸಬಲೀಕರಣವನ್ನು ಮಾಡುವ ಕಾರ್ಯಗಳನ್ನು ಮಾಡುತ್ತಿದೆ. ಯುದ್ಧಪೀಡಿತ ಸಂದರ್ಭದಲ್ಲಿ ಕಂಡುಬರುವ ಜೀವಹಾನಿಯನ್ನು ತಪ್ಪಿಸಲು ಪ್ರಯತ್ನಿಸುತ್ತದೆ. ಹೆನ್ರಿ ಡ್ಯೂನಾಂಟ್ ಅವರ ದೂರದೃಷ್ಠಿಯ ಫಲವೇ ಈ ಸಂಸ್ಥೆಯ ಉಗಮಕ್ಕೆ ಕಾರಣವಾಯಿತೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ, ಪ್ರಾಚಾರ್ಯ ಭೀಮಾಶಂಕರ ಘತ್ತರಗಿ, ಬಳಗದ ಹಿರಿಯ ಸದಸ್ಯ ಶಿವಯೋಗಪ್ಪ ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಉಪನ್ಯಾಸಕಿ ಅಶ್ವಿನಿ ಪಾಟೀಲ, ಪ್ರಮುಖರಾದ ಕಾವೇರಿ ಹಡಪದ, ಪವಿತ್ರಾ ಪಿ.ಪೊಲೀಸ್ ಪಾಟೀಲ್, ಗೊಲ್ಲಾಳಪ್ಪ ಟಿ.ಪೂಜಾರಿ, ನಾಗರಾಜ ಬಿ.ಪಾಟೀಲ, ಅಭಿಶೇಕ್ ಜನಾದಿ, ವೀರಭದ್ರ ಎಂ.ಪಾಟೀಲ್, ಶರಣಬಸಪ್ಪ, ಸುನೀಲ ಎ., ಸೇರಿದಂತೆ ಮತ್ತಿತರರಿದ್ದರು.