
ಕಲಬುರಗಿ:ಫೆ.28: ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯು ಅಲ್ಲಿನ ವಿಜ್ಞಾನದ ಬೆಳವಣಿಗೆಯ ಮೇಲೆ ಅವಲಂಬಿಸಿದೆ. ವಿಜ್ಞಾನವು ಹೊಸ ಸಂಶೋಧನೆಗಳ ಮೂಲಕ ಅನೇಕ ಸೌಕರ್ಯಗಳನ್ನು ದೊರೆಯುವಂತೆ ಮಾಡಿ, ಯಾವುದೇ ರಾಷ್ಟ್ರವು ಅತ್ಯಂತ ಶೀಘ್ರವಾಗಿ ಅಭಿವೃದ್ಧಿ ಹೊಂದುವಂತೆ ಮಾಡುತ್ತದೆ. ವಿಜ್ಞಾನವು ರಾಷ್ಟ್ರದ ಅಭಿವೃದ್ಧಿಯ ಚಾಲನಾ ಶಕ್ತಿಯಾಗಿ ಕಾರ್ಯನಿರ್ವಹಿಸುವ ಮೂಲಕ ವಿಶ್ವದ ಅಭಿವೃದ್ಧಿಗೆ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್.ಸಿ.ವಿ.ರಾಮನ್ ಅವರ ‘ರಾಮನ್ ಪರಿಣಾಮ’ದಿಂದಾಗಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಸಮುದ್ರದ ನೀಲಿ ಬಣ್ಣಕ್ಕೆ ಬೆಳಕಿನ ಚದುರುವಿಕೆ ಕಾರಣವೆಂಬ ಸಂಶೋಧನೆಗೆ ವಿಶ್ವದ ಶ್ರೇಷ್ಠ ಪ್ರಶಸ್ತಿಯಾದ ನೋಬಲ್ ಪಾರಿತೋಷಕ 1930ರಲ್ಲಿ ಪಡೆದು ನಮ್ಮ ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ಇದರ ಸವಿನೆನಪಿಗಾಗಿ ಪ್ರತಿವರ್ಷ ‘ಫೆ-28’ನ್ನು ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಸಂಸ್ಥೆಯ ಪ್ರಾಚಾರ್ಯ ಭೀಮಾಶಂಕರ ಘತ್ತರಗಿ ಮಾತನಾಡಿ, ವಿಜ್ಞಾನ ಫಲ ಪ್ರಯೋಗಾಲಯಕ್ಕೆ ಸೀಮಿತವಾಗದೆ, ಜನಸಾಮಾನ್ಯರಿಗೆ ದೊರಕಬೇಕು. ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ವಿಜ್ಞಾನದ ಬಳಕೆ ಹೆಚ್ಚಾಗಬೇಕಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ವಿಜ್ಞಾನದ ಬಗ್ಗೆ ತುಂಬಾ ಆಸಕ್ತಿ, ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಅರ್ಶವಿನಿ ಜಿ.ಪಾಟೀಲ, ಅರ್ಚನಾ ಎಂ.ಹೀರಾಪುರ, ಪ್ರಮುಖರಾದ ಐಶ್ವರ್ಯ ಎಂ.ಶೀಲಾರ, ಪೂಜಾ ಬಿ.ಕೊರಳ್ಳಿ, ಗಂಗಾಧರ ರಸ್.ಗುಡೂರ್ ಸೇರಿದಂತೆ ಮತ್ತಿತರರಿದ್ದರು.