ವಿಶ್ವದಲ್ಲೇ ಸಂವಿಧಾನ ಅತ್ಯಂತ ಶ್ರೇಷ್ಠ: ನ್ಯಾ. ಗಂಗಾಧರ್

ಕೋಲಾರ,ಡಿ.೨- ಭಾರತದ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನವಾಗಿದ್ದು, ಇಲ್ಲಿ ಪ್ರತಿಯೊಬ್ಬರಿಗೂ ಸಮಾನವಾಗಿ ವಾಸಿಸುವ,ಬದುಕುವ ಹಕ್ಕು ಇದೆ ಎಂದು ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ವಕೀಲರ ಸಂಘ ಹಾಗೂ ಸರ್ಕಾರಿ ಕಾನೂನು ಕಾಲೇಜು ಆಶ್ರಯದಲ್ಲಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.
ಗಾಂಧೀಜಿ, ಅಂಬೇಡ್ಕರ್ ಅವರಂತಹವರನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಜತೆಗೆ ತಲೆಯಲ್ಲೂ ಇಟ್ಟುಕೊಳ್ಳಬೇಕು. ಮಹಾತ್ಮಗಾಂಧೀಜಿಯ ಹೆಸರು ಹೇಳುತ್ತೇವೆ ಆದರೆ ಅವರ ತತ್ವ ಪಾಲಿಸುವುದಿಲ್ಲ ಎಂದರೆ ಅರ್ಥವಿಲ್ಲ ಎಂದರು.
ಶ್ರೀಮಂತವಾಗಿರುವ ಭಾರತದಲ್ಲಿ ಜನಸಾಮಾನ್ಯರಿಗೆ ಸಿಗಬೇಕಾದ ಕನಿಷ್ಟ ಹಕ್ಕುಗಳನ್ನು ಕಲ್ಪಿಸುವ ಸಲುವಾಗಿ ಸಂವಿಧಾನ ಶಕ್ತಿ ಹೊಂದಿದೆ, ಆದರೂ ಹಲವಾರು ಮಂದಿ ಕಾನೂನಿನ ಅರಿವು ಇಲ್ಲದೇ ಅನ್ಯಾಯಕ್ಕೆ ಒಳಗಾಗುತ್ತಿದ್ದು, ಇದನ್ನು ತಪ್ಪಿಸುವುದು ಪ್ರತಿಯೊಬ್ಬರ ಹೊಣೆ ಎಂದರು.
ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ನಡೆದುಕೊಳ್ಳುವುದು ದೇಶದ್ರೋಹ, ಐಕ್ಯತೆಯನ್ನು ಮುರಿಯುವ ಕೆಲಸ. ಅಂತಹ ಕೆಲಸಗಳಿಗೆ ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ಸಂವಿಧಾನವನ್ನು ಓದಿದರೆ ಅರ್ಥ ಆಗುತ್ತದೆ, ಜತೆಗೆ ಅದನ್ನು ಪಾಲಿಸುವ,ಗೌರವಿಸುವ ಪ್ರವೃತ್ತಿಯೂ ಬಲಗೊಳ್ಳಬೇಕು ಎಂದರು
ಸ್ವಾತಂತ್ರ್ಯ ಬಂದ ನಂತರ ಭಾರತ ೭೦ ವರ್ಷಗಳಲ್ಲಿ ಸಾಕಷ್ಟು ಸಾಧಿಸಿದೆ. ಶೇ. ೨೦ರಷ್ಟಿದ್ದ ಸಾಕ್ಷರತೆ ಪ್ರಮಾಣ ಶೇ. ೮೦ಕ್ಕೆ ಬಂದಿದೆ, ಬಡತನ ನಿವಾರಣೆ ಮಾಡಲಾಗುತ್ತಿದೆ. ಆದರೆ ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆ, ಕೋಮುವಾದ, ಮೂಲಭೂತವಾದ, ಭ್ರಷ್ಟಾಚಾರ, ಸಾಂಸ್ಕೃತಿಕ ದಿವಾಳಿತನ ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಾಗಿದ್ದು, ಇದನ್ನು ನಿರ್ಮೂಲನೆ ಮಾಡುವ ಶಕ್ತಿ ಸಂವಿಧಾನಕ್ಕಿದೆ ಎಂದರು.
ಜನರ ಜೀವನ ಮಟ್ಟವನ್ನು ಇನ್ನಷ್ಟು ಉತ್ತಮಪಡಿಸುವುದು ಇನ್ನಿತರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಒಂದಕ್ಕೂಂದು ಪೂರಕವಾಗಿ ಕೆಲಸ ಮಾಡುವುದೇ ಸಂವಿಧಾನವನ್ನು ಪಾಲಿಸುವುದು ಎಂದರ್ಥ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಂ.ಅನಿತಾ, ಭಾರತದ ಬ್ರಿಟೀಷರ ದಾಸ್ಯದಿಂದ ಮುಕ್ತರಾಗಲು ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ಭಾರತ ಸ್ವಾತಂತ್ರ್ಯ ಪಡೆದು ೭೦ ವರ್ಷಗಳಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ. ಹಕ್ಕುಗಳನ್ನು ಕೇಳುವ ನಾವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿಲ್ಲ ಎಂದು ನುಡಿದರು.
ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್, ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲರಿಗೂ ನ್ಯಾಯ ಸಿಗಬೇಕು, ಬಡ ದೀನ ದಲಿತರು, ತುಳಿತಕ್ಕೆ ಒಳಗಾದವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಘುಪತಿಗೌಡ, ವಕೀಲ ಕೆ.ಆರ್.ಧನರಾಜ್, ಕಾನೂನು ಸೇವಾ ಸಮಿತಿ ಸಂಚಾಲಕ ಡಾ.ಮಂಜು ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ನಾಗಶೇಷಮ್ಮ, ಡಾ.ಪ್ರಸನ್ನಕುಮಾರಿ, ಡಾ,ಧನಲಕ್ಷ್ಮಿ, ಡಾ.ಕಾವ್ಯಶ್ರೀ ಕಾರ್ಯನಿರ್ವಹಿಸಿದರು.