ವಿಶ್ವದಲ್ಲೇ ಜನಸಂಖ್ಯೆ ಸ್ಪೋಟದಲ್ಲಿ ಭಾರತಕ್ಕೆ ಮೊದಲ ಸ್ಥಾನ

ಹುಳಿಯಾರು, ಜು. ೨೦- ಭಾರತದಲ್ಲಿ ೧೯೦೧ ರಲ್ಲಿ ೨೩ ಕೋಟಿ, ೧೯೨೧ ರಲ್ಲಿ ೨೫ ಕೋಟಿ, ೧೯೫೧ ರಲ್ಲಿ ೩೬ ಕೋಟಿ, ೨೦೦೧ ರಲ್ಲಿ ೧೦೨ ಕೋಟಿ ಈಗ ಅಂದರೆ ೨೦೨೧ ರಲ್ಲಿ ೧೩೯ ಕೋಟಿ ಜನಸಂಖ್ಯೆ ಇದೆ. ಈ ಜನಸಂಖ್ಯಾ ಸ್ಪೋಟ ಹೀಗೆಯೇ ಮುಂದುವರೆದರೆ ೨೦೨೩ ರಲ್ಲಿ ೧೪೨ ಕೋಟಿಗೆ ಜನಸಂಖ್ಯೆ ತಲುಪಿ ಚೀನಾ ದೇಶವನ್ನೇ ಹಿಂದಿಕ್ಕಿ ವಿಶ್ವದಲ್ಲಿ ಭಾರತ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಉಪನ್ಯಾಸಕ ಕೆ.ಎಸ್.ಶಂಕರ್ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬರಕ್ಷಾಮಕ್ಕೆ ಸೂಕ್ತ ಪರಿಹಾರ, ಕ್ಷಯ, ಕ್ಯಾನ್ಸರ್, ಪ್ಲೇಗ್ ಮುಂತಾದ ಮಾರಣಾಂತಿಕ ರೋಗಗಳಿಗೆ ಔಷಧಿ ಕಂಡು ಹಿಡಿದಿರುವುದು, ಪೌಷ್ಠಿಕ ಆಹಾರ ಸೇವನೆಯ ಅರಿವು ಹೀಗೆ ಹಲವು ಕಾರಣಗಳಿಂದ ಭಾರತದಲ್ಲಿ ಮರಣದ ಸಂಖ್ಯೆ ಇಳಿದಿರುವುದರಿಂದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಅಲ್ಲದೆ ಬಡತನ, ಕೃಷಿ ಕುಟುಂಬ, ಬಹುಪತ್ನಿತ್ವ ಪದ್ಧತಿ, ಪುತ್ರ ಸಂತಾನದ ಅಪೇಕ್ಷೆ, ಬೇಗ ಮದುವೆ ಮಾಡುವುದು ಸಹ ಜನಸಂಖ್ಯೆ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.
ಜನಸಂಖ್ಯೆ ಸ್ಪೋಟದಿಂದ ಭೂ, ಅರಣ್ಯ, ಪ್ರಾಣಿ, ಪಕ್ಷಿ, ಕೀಟ, ಸಸ್ಯಗಳ ನಾಶ, ಪರಿಣಾಮ ೨-೩ ಅಡಿಗೆ ಸಿಗುತ್ತಿದ್ದ ನೀರು ಸಾವಿರ ಅಡಿ ಆಳಕ್ಕೆ ತಲುಪಿದೆ. ಭೂಕಂಪನ, ಸುನಾಮಿ, ಸೈಕ್ಲೋನ್, ಹವಮಾನ ವೈಪರಿತ್ಯ, ತಾಪಮಾನ ಹೆಚ್ಚಳ ಹಾಗೂ ಬರ ಎದುರಾಗುತ್ತದೆ. ಜಲ, ಶಬ್ಧ, ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಕೈಗಾರಿಕೆಗಳು ಹೆಚ್ಚಾಗಿ ಆಮ್ಲ ಮಳೆ ಬರುತ್ತದೆ. ಓಝೋನ್ ಪದರಕ್ಕೆ ಹಾನಿಯಾಗುತ್ತದೆ. ಅತಿವೃಷ್ಠಿ, ಅನಾವೃಷ್ಠಿ ಎದುರಾಗುತ್ತದೆ. ಹಾಗಾಗಿ ಯುವ ಜನತೆ ಎಚ್ಚೆತ್ತುಕೊಂಡು ಜನಸಂಖ್ಯೆ ಸ್ಪೋಟ ತಡೆಯದಿದ್ದರೆ ಮುಂದಿನ ಪೀಳಿಗೆ ಇನ್ನೂ ಭೀಕರ ಸ್ಥಿತಿ ಎದುರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಸಿ.ವೀರಣ್ಣ ವಹಿಸಿದ್ದರು. ಉಪನ್ಯಾಸಕ ಡಾ.ಎಂ.ಜೆ.ಮೋಹನ್‌ಕುಮಾರ್, ಗ್ರಂಥಪಾಲಕ ಡಾ.ಲೋಕೇಶ್‌ನಾಯ್ಕ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಜಯಪ್ರಕಾಶ್, ಉಪನ್ಯಾಸಕ ಸುಷ್ಮಾಬೀರಾದಾರ್ ಮತ್ತಿತರರು ಉಪಸ್ಥಿತರಿದ್ದರು.