ವಿಶ್ವದಲ್ಲಿ ಮತ್ತೆ ಆಹಾರ ಕೊರತೆ ಭೀತಿ

ಮಾಸ್ಕೊ, ಜು.೧೮- ಉಕ್ರೇನ್‌ನಿಂದ ಕಪ್ಪು ಸಮುದ್ರದ ಮೂಲಕ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಶ್ಯಾ ದೇಶಗಳಿಗೆ ಧಾನ್ಯವನ್ನು ಸಾಗಿಸಲು ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆದಿದ್ದ ಒಪ್ಪಂದವನ್ನು ಸ್ಥಗಿತಗೊಳಿಸಿರುವುದಾಗಿ ರಷ್ಯಾ ಇದೀಗ ಘೋಷಿಸಿದೆ. ಸಹಜವಾಗಿಯೇ ಇದರಿಂದ ಆಫ್ರಿಕಾ ಸೇರಿದಂತೆ ವಿಶ್ವದ ಆರ್ಥಿಕ ದುರ್ಬಲ ದೇಶಗಳಿಗೆ ಆಹಾರ-ಧಾನ್ಯ ಪೂರೈಕೆ ವಿಚಾರದಲ್ಲಿ ಭಾರೀ ಆಘಾತ ಮೂಡಿಸಿದೆ. ದಿನದ ಹಿಂದೆ ಕ್ರೈಮಿಯಾ ಸೇತುವೆಯ ವೇಳೆ ಉಕ್ರೇನ್ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದ ಆಕ್ರೋಶಿತ ರಷ್ಯಾ ಈ ಕಠಿಣ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ರಷ್ಯಾದ ಕೆಲವು ಬೇಡಿಕೆಗಳು ಈಡೇರಿದ ಬಳಿಕ ಮತ್ತೆ ಒಪ್ಪಂದಕ್ಕೆ ಚಾಲನೆ ನೀಡಲಾಗುವುದು ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಘೋಷಿಸಿದ್ದಾರೆ. ಕಪ್ಪುಸಮುದ್ರ ಒಪ್ಪಂದದಲ್ಲಿ ರಷ್ಯಾಗೆ ಸಂಬಂಧಿಸಿದ ಅಂಶಗಳು ಅನುಷ್ಟಾನಗೊಂಡ ತಕ್ಷಣ ನಾವು ಮತ್ತೆ ಈ ಒಪ್ಪಂದಕ್ಕೆ ಮರಳುತ್ತೇವೆ ಎಂದವರು ಹೇಳಿದ್ದಾರೆ. ಕಳೆದ ಬೇಸಿಗೆಯಲ್ಲಿ ವಿಶ್ವಸಂಸ್ಥೆ ಮತ್ತು ಟರ್ಕಿಯ ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡ ಒಪ್ಪಂದದಂತೆ, ಕಪ್ಪುಸಮುದ್ರ ಪ್ರದೇಶದ ಮೂಲಕ ಆಹಾರ ಧಾನ್ಯಗಳನ್ನು ಸಾಗಿಸಲು ಅವಕಾಶ ನೀಡಲಾಗಿದೆ. ಇದರ ಜತೆಗೆ ಮಾಡಿಕೊಂಡಪ್ರತ್ಯೇಕ ಒಪ್ಪಂದವು ಪಾಶ್ಚಿಮಾತ್ಯರ ನಿರ್ಬಂಧದ ಹೊರತಾಗಿಯೂ, ಕಪ್ಪುಸಮುದ್ರದ ಮೂಲಕ ರಷ್ಯಾದ ಆಹಾರಧಾನ್ಯ ಮತ್ತು ರಸಗೊಬ್ಬರ ಸಾಗಿಸಲು ಅವಕಾಶ ನೀಡಿದೆ. ಆದರೆ ತನಗೆ ಸಂಬಂಧಿಸಿದ ಒಪ್ಪಂದ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ. ಆಹಾರ ಮತ್ತು ರಸಗೊಬ್ಬರ ರಫ್ತಿಗೆ ಇನ್ನೂ ಸಂಪೂರ್ಣ ಅವಕಾಶ ದೊರಕಿಲ್ಲ ಎಂಬುದು ರಷ್ಯಾ ಆಕ್ರೋಶ ವ್ಯಕ್ತಪಡಿಸಿದೆ. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಗೋಧಿ, ಬಾರ್ಲಿ, ಸನ್‌ಫ್ಲವರ್ ಎಣ್ಣೆ ಸೇರಿದಂತೆ ಇತರ ಆಹಾರ ವಸ್ತುಗಳ ಪ್ರಮುಖ ರಫ್ತು ಕೇಂದ್ರಗಳಾಗಿವೆ. ಮೇ ತಿಂಗಳಿನಲ್ಲಿ ಈ ಒಪ್ಪಂದವನ್ನು ಮತ್ತೆ ೬೦ ದಿನಕ್ಕೆ ನವೀಕರಿಸಲಾಗಿದೆ. ಕೋವಿಡ್ ಸಾಂಕ್ರಾಮಿಕದ ಆಘಾತದಿಂದ ಜಾಗತಿಕ ಸಮುದಾಯ ಚೇತರಿಸಿಕೊಳ್ಳುತ್ತಿರುವಂತೆಯೇ ಉಕ್ರೇನ್ ಯುದ್ಧದಿಂದಾಗಿ ಆಹಾರ ವಸ್ತುಗಳ ಬೆಲೆ ಕಳೆದ ವರ್ಷ ಗಗನಕ್ಕೇರಿತ್ತು. ಜತೆಗೆ, ಬರಗಾಲ ಮತ್ತಿತರ ಪ್ರಾಕೃತಿ ದುರಂತದಿಂದಾಗಿ ಆಹಾರದ ಕೊರತೆಯಾಗಿದ್ದು ವಿಶೇಷವಾಗಿ ಲೆಬನಾನ್, ನೈಜೀರಿಯಾ, ಸೊಮಾಲಿಯಾ, ಕೆನ್ಯಾ, ಮೊರೊಕ್ಕೋ, ಟ್ಯುನೀಷಿಯಾ ದೇಶಗಳ ಕೋಟ್ಯಾಂತರ ಜನರನ್ನು ಆಹಾರದ ಅಭದ್ರತೆ ಮತ್ತು ಬಡತನದ ಅಂಚಿಗೆ ತಂದುನಿಲ್ಲಿಸಿದೆ. ಅಭಿವೃದ್ಧಿ ಹೊಂದಿದ ದೇಶಗಳು ಆಹಾರದ ಬೆಲೆಯೇರಿಕೆಯ ಪ್ರಹಾರವನ್ನು ತಾಳಿಕೊಳ್ಳಲು ಸಮರ್ಥವಾಗಿದ್ದರೂ ಬಹುತೇಕ ಅಗತ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಿರುವ ಬಡದೇಶಗಳ ಅರ್ಥವ್ಯವಸ್ಥೆ ಮತ್ತಷ್ಟು ಬಿಗಡಾಯಿಸಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಕಪ್ಪು ಸಮುದ್ರ ಆಹಾರ ಒಪ್ಪಂದವು ಹಲವಾರು ದೇಶಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸ್ಥಗಿತಗೊಳಿಸಿದರೆ ಈಗಾಗಲೇ ವಿದೇಶಿ ಸಾಲದ ಹೊರೆ, ಹವಾಮಾನ ವೈಪರೀತ್ಯದ ಸಮಸ್ಯೆಯಿಂದ ತತ್ತರಿಸಿರುವ ಬಡದೇಶಗಳ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ವಿದೇಶಿ ವಿನಿಮಯ ಸಂಗ್ರಹ ಕುಸಿಯುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೂಲಕ ಪಾವತಿಸಲು ಬಡದೇಶಗಳಿಗೆ ಅಸಾಧ್ಯವಾಗುವ ಪರಿಸ್ಥಿತಿ ನೆಲೆಸಲಿದೆ ಎಂದು ಅರ್ಥಶಾಸ್ತ್ರಜ್ಞ ಸೈಮನ್ ಎವೆನೆಟ್ ಹೇಳಿದ್ದಾರೆ. ವಿಶ್ವದ ೪೫ ದೇಶಗಳು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿ ಸಿಲುಕಿವೆ ಎಂದು ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಘಟನೆಯ ವರದಿ ಹೇಳಿದೆ. ರಶ್ಯದಿಂದ ನಿರಂತರ ಅಡ್ಡಿ: ಉಕ್ರೇನ್ ಆರೋಪ ಕಪ್ಪು ಸಮುದ್ರದ ಮೂಲಕ ಆಹಾರ ಸಾಗಣೆಗೆ ಏರ್ಪಟ್ಟಿರುವ ಒಪ್ಪಂದ ಸೂಕ್ತವಾಗಿ ಅನುಷ್ಟಾನಗೊಳ್ಳಲು ರಶ್ಯ ನಿರಂತರ ಅಡ್ಡಿಯಾಗುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ. ಕಳೆದ ನವೆಂಬರ್‍ನಲ್ಲಿಯೂ ಈ ಒಪ್ಪಂದದಿಂದ ರಶ್ಯ ಹಿಂದೆ ಸರಿದಿತ್ತು, ಬಳಿಕ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ಮರಳಿ ಸೇರ್ಪಡೆಗೊಂಡಿದೆ. ಅಲ್ಲದೆ ಸರಕು ಸಾಗಿಸಲು ಹೆಚ್ಚುವರಿ ಹಡಗುಗಳನ್ನು ಬಳಸಲು ರಶ್ಯ ಅಡ್ಡಿಪಡಿಸುತ್ತಿದೆ ಎಂದು ಉಕ್ರೇನ್ ಹೇಳಿದೆ. ಈ ಒಪ್ಪಂದವು ಕಪ್ಪುಸಮುದ್ರ ವ್ಯಾಪ್ತಿಯಲ್ಲಿರುವ ಉಕ್ರೇನ್‌ನ ಮೂರು ಬಂದರುಗಳಿಂದ ೩೨.೯ ದಶಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯವನ್ನು ಜಾಗತಿಕ ಮಾರುಕಟ್ಟೆಗೆ ಪೂರೈಸಲಾಗಿದೆ ಎಂದು ಟರ್ಕಿಯಲ್ಲಿರುವ ಜಂಟಿ ಸಮನ್ವಯ ಕೇಂದ್ರದ ಹೇಳಿಕೆ ತಿಳಿಸಿದೆ. ಈ ಮಧ್ಯೆ, ರಶ್ಯವು ೨೦೨೨-೨೩ರ ಆರ್ಥಿಕ ವರ್ಷದಲ್ಲಿ ೪೫.೫ ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟು ಆಹಾರ ಧಾನ್ಯಗಳನ್ನು ಜಾಗತಿಕ ಮಾರುಕಟ್ಟೆಗೆ ಪೂರೈಸಿದೆ ಎಂದು ವರದಿಯಾಗಿದೆ.