
ರಾಯಚೂರು,ಏ. ೨೪- ನಗರದ ಬಸವ ಕೇಂದ್ರದಲ್ಲಿ ವಿಶ್ವಗುರು ಬಸವಣ್ಣನವರ ೮೯೦ನೇ ಜಯಂತೋತ್ಸವ ಅಂಗವಾಗಿ ಬಸವ ಕೇಂದ್ರ, ಅಕ್ಕನ ಬಳಗ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಎಲ್ಲ ಬಸವಪರ ಸಂಘಟನೆಗಳ ಅಧ್ಯಕ್ಷರಿಂದ ಹಾಗೂ ಗಣ್ಯರಿಂದ ಷಟಸ್ಥಲ ಧ್ವಜಾರೋಹಣ ಹಾಗೂ ಬಸವ ಪುತ್ತಳಿಗೆ ಮಾಲಾರ್ಪಣೆ ಮೂಲಕ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾದ ಹನ್ನೆರಡನೆಯ ಶತಮಾನದ ಶಿವಶರಣ- ಶಿವಶರಣೆಯರ ಚಿಂತನಾಗೋಷ್ಠಿ ಮಹೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಯಚೂರು ಜಿಲ್ಲಾ ವೀರಶೈವ ಸಮಾಜದ ಉಪಾಧ್ಯಕ್ಷರಾದ ವಿರುಪನಗೌಡ ಇಟಗಿ ಮಾತನಾಡುತ್ತ, ಬಸವ ಜಯಂತಿ ಸರ್ವ ಸಮಾಜದವರು ಆಚರಿಸಿ ಜಗಜ್ಯೋತಿ ಬಸವೇಶ್ವರರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶರಣ ಪರಮೇಶ್ವರ ಸಾಲಿಮಠ, ನಿವೃತ್ತ ಪ್ರಾಚಾರ್ಯರು ೧೨ನೇ ಶತಮಾನದ ಬಸವಣ್ಣನವರ ಬೆಳಕಿನಲ್ಲಿ ಬೆಳಗಾದ ಶಿವಶರಣೆಯರ ಕುರಿತು ಚಿಂತನೆ ಮಾಡುತ್ತಾ, ಅವರ ವಚನಗಳನ್ನು ನಿರ್ವಚನ ಮಾಡಿ, ಅವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಸಮಾಜದ ಎಲ್ಲಾ ಮಹಿಳೆಯರು ಪಾಲಿಸಿ ಶ್ರೇಷ್ಠ ಶಿವಶರಣೆಯರಾಗಬೇಕೆಂದು ಕರೆ ನೀಡಿದರು ಹಾಗು ಜಗತ್ತಿನ ಪ್ರಪ್ರಥಮ ಪಾರ್ಲಿಮೆಂಟ್, ಕಲ್ಯಾಣದ ಅನುಭವ ಮಂಟಪದ ಸಂಸ್ಥಾಪಕರಾದ ಅಣ್ಣ ಬಸವಣ್ಣನವರ ಕುರಿತು ಸಮಗ್ರವಾಗಿ ಮತ್ತು ಅರ್ಥಗರ್ಭಿತವಾಗಿ ಚಿಂತನೆ ಮಾಡುತ್ತಾ ಬಸವಣ್ಣನವರ ಸಮಾಜೋದ್ಧಾರ, ಕಾಯಕನಿಷ್ಠ ದಾಸೋಹ, ಸಮಾನತೆ ಏಕದೇವೋಪಾಸನೆ ಮುಂತಾದ ತತ್ವಗಳನ್ನು ಸಾಧ್ಯವಾದಷ್ಟು ಪಾಲಿಸಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಚನಗೌಡ ಕೋಳೂರು, ಅಧಕ್ಷರು, ಬಸವ ಕೇಂದ್ರ ರಾಯಚೂರ ವಹಿಸಿದ್ದರು ಹಾಗು ಚಂದ್ರಶೇಖರ ಪಾಟೀಲ್ ಮಿರ್ಜಾಪೂರ್, ದೇವಣ್ಣ ನಾಯಕ್, ಜೆ. ಬಸವರಾಜು, ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಚನ ಗಾಯನ ಮತ್ತು ಬಸವಪ್ರಾರ್ಥನೆಯನ್ನು ರಾಘವೇಂದ್ರ ಆಶಾಪುರ ಮತ್ತು ಶಿಷ್ಯರು, ಅಕ್ಕನ ಬಳಗದ ಸದಸ್ಯರು ನಡೆಸಿಕೊಟ್ಟರು.
ಕುಮಾರಿ ಹಂಸಿನಿ ಮಾಟೂರ ಮತ್ತು ಕುಮಾರಿ ಈಶಾನ್ವಿ ಸುಡಿ ಇವರು ಬಸವಣ್ಣನವರ ವಚನಗಳಿಗೆ ನೃತ್ಯ ಪ್ರದರ್ಶನ ಮಾಡಿ ನೆರೆದಿದ್ದ ಜನರ ಮನಸೂರೆಗೊಂಡರು.
ಶರಣೀ ದೇವೇಂದ್ರಮ್ಮ, ಸ್ವಾಗತ ಕೋರಿದರು, ಚನ್ನಬಸವಣ್ಣ ಮಹಾಜನಶೆಟ್ಟಿ, ಕಾರ್ಯದರ್ಶಿ, ಬಸವ ಕೇಂದ್ರ, ರಾಯಚೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಕುಮಾರ್ ಮಾಟೂರ್ ನಿರೂಪಿಸಿದರು ಹಾಗು ಶರಣಿ ಸುಮಂಗಲಮ್ಮ ಹಿರೇಮಠ ವಂದಿಸಿದರು.