ರೋಣ,ಏ.24: ಕಾಯಕವೇ ಕೈಲಾಸ ಎಂಬ ಸಂದೇಶ ನೀಡಿದ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳು ಅಳವಡಿಸಿಕೊಂಡು ಅವರು ನುಡಿದ ಹಾಗೆ ಕಾಯಕದ ಸ್ಥಳದಲ್ಲಿ ಬಸವಣ್ಣನವರ ಜಯಂತಿ ಆಚರಣೆ ಮಾಡಲಾಯಿತು.
ರೋಣ ತಾಲೂಕಿನ ಹೊಳೆ ಮಣ್ಣೂರ, ಹೊಳೆ ಆಲೂರು ಹಾಗೂ ಗಾಡಗೊಳಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ವೇಳೆ ಕಾಯಕಯೋಗಿ ಬಸವಣ್ಣನವರ ಜಯಂತಿಯನ್ನು ಅವರ ಸಿದ್ದಾಂತದ ಅನುಸಾರ ಅರ್ಥ ಪೂರ್ಣವಾಗಿ ಆಚರಣೆ ಮಾಡುವ ಮೂಲಕ ಕಾಯಕಯೋಗಿ ಬಸವಣ್ಣನವರಿಗೆ ಗೌರವ ಸಲ್ಲಿಸಲಾಯಿತು..
ನರೇಗಾ ಕೂಲಿ ಕಾರ್ಮಿಕರ ವತಿಯಿಂದ ಹಮ್ಮಿಕೊಂಡಿದ್ದ ಕಾಯಕ ಯೋಗಿ ಬಸವಣ್ಣನವರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ, ಕಾಯಕ ತತ್ವವನ್ನು ಎತ್ತಿ ಹಿಡಿದ ಬಸವಣ್ಣನವರ ಜಯಂತಿಯನ್ನು ನರೇಗಾ ಕೂಲಿ ಕಾರ್ಮಿಕರೊಂದಿಗೆ ಆಚರಿಸುತ್ತಿರುವುದು ಖುಷಿ ತಂದಿದೆ. ಬಸವಣ್ಣ ಶರಣ ಕುಲದ ಶಕ್ತಿಯಾಗಿ ದೀನ ದಮನಿತರ ಸಮಾಜದಲ್ಲಿ ಕೆಳಸ್ತರದ ಕಾಯಕ ಮಾಡುವ ಜನರಲ್ಲಿ ಜಾಗೃತಿ ಮೂಡಿಸಿ ‘ಕಾಯಕ’ ದ ಕಲ್ಪನೆ ಕೊಟ್ಟು ಸಮಾನತೆಯ ಕಹಳೆ ಮೊಳಗಿಸಿದ ಕ್ರಾಂತಿಯ ಕಿಡಿಯಾಗಿದ್ದಾರೆ ಅಂತಹ ಮಹಾನ್ ವ್ಯಕ್ತಿಯ ಜಯಂತಿ ಯನ್ನು ತಮ್ಮೆಲ್ಲರ ಜೊತೆಗೆ ಆಚರಿಸಿದ್ದು ನಿಜವಾಗಿಯೂ ಕಾಯಕ ಯೋಗಿಗೆ ಸಲ್ಲಿಸಿದ ಗೌರವ ಎಂದರು.
ಇದೆ ಸಂದರ್ಭದಲ್ಲಿ ನರೇಗಾ ಯೋಜನೆಯ ಬಗ್ಗೆ ಮಾತನಾಡಿದ ಅವರು ಬರದ ಬವಣೆಯಲ್ಲಿ ಬೆಂದ ಬಡ ಕೂಲಿಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಅದನ್ನು ಬಳಸಿಕೊಂಡು ಗುಳೇ ಹೋಗುವುದಕ್ಕೆ ಬ್ರೇಕ್ ಹಾಕಬೇಕು. ಪ್ರತಿ ದಿನ ನೀವು ಮಾಡುವ ಕೆಲಸಕ್ಕೆ 316 ರೂಪಾಯಿ ಸರ್ಕಾರ ಕೊಡುತ್ತದೆ. ಅದಕ್ಕೆ ತಕ್ಕ ಹಾಗೆ ಕೆಲಸ ಮಾಡಿದಾಗ ಮಾತ್ರ ಈ ಯೋಜನೆಯು ಸಫಲತೆ ಕಾಣುತ್ತದೆ ಎಂದರು..
ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕರಾದ ಲಿಂಗರಾಜಗೌಡ ಮುದಿಗೌಡ್ರ, ಃಈಖಿ ಈರಣ್ಣ ದಳವಾಯಿ,ಬಿಲ್ ಕಲೆಕ್ಟರ್ ಯಂಕಪ್ಪ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಕೂಲಿ ಕಾರ್ಮಿಕರು ಹಾಜರಿದ್ದರು…