ವಿಶ್ವಗುರು ಆಗುವತ್ತ ಭಾರತದ ದಾಪುಗಾಲು

ಬೀದರ್:ಏ.6: ವಿಶ್ವಗುರು ಆಗುವತ್ತ ಭಾರತ ದಾಪುಗಾಲು ಇಟ್ಟಿದೆ ಎಂದು ಸ್ವಾವಲಂಬಿ ಭಾರತ ಅಭಿಯಾನದ ಜಿಲ್ಲಾ ಪ್ರಮುಖ ರೇವಣಸಿದ್ದ ಜಾಡರ್ ನುಡಿದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾವಲಂಬಿ ಭಾರತ ಅಭಿಯಾನ ನಿಮಿತ್ತ ನಗರದ ಸನ್‍ಸಾಫ್ಟ್ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ಪಾದನೆ ಸೇರಿದಂತೆ ಭಾರತ ಎಲ್ಲ ರಂಗಗಳಲ್ಲೂ ಶರವೇಗದಲ್ಲಿ ಬೆಳೆಯುತ್ತಿದೆ. ಸ್ವಾವಲಂಬಿ ಆಗುತ್ತಿದೆ ಎಂದು ತಿಳಿಸಿದರು.
ಸೂಕ್ತ ಮಾರ್ಗದರ್ಶನ ಹಾಗೂ ಅವಕಾಶಗಳ ಅರಿವಿನ ಕೊರತೆಯಿಂದಾಗಿ ಯುವಕರು ನಿರುದ್ಯೋಗ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಯುವಕರು ಕೃಷಿ, ಸ್ವ ಉದ್ಯೋಗ, ಸಣ್ಣ ಕೈಗಾರಿಕೆ, ಸೇವಾ ಕೇಂದ್ರ ಮೊದಲಾದವುಗಳ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ನಿತ್ಯದ ಜೀವನದಲ್ಲಿ ಸ್ಥಳೀಯ ಹಾಗೂ ಸ್ವದೇಶಿ ಉತ್ಪನ್ನಗಳನ್ನೇ ಬಳಸುವ ಮೂಲಕ ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಭಾರತ ಕಟ್ಟಲು ಕೈಜೋಡಿಸಬೇಕು ಎಂದು ತಿಳಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ಮಾತನಾಡಿ, ಬದುಕು ಕಟ್ಟಿಕೊಳ್ಳಲು ಹಲವಾರು ಅವಕಾಶಗಳು ಇವೆ. ಜೀವನದಲ್ಲಿ ಜಿಗುಪ್ಸೆಗೊಳ್ಳದೆ, ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಉಪನ್ಯಾಸಕ ಶಶಿಧರ, ಪರಿಷತ್ ಜಿಲ್ಲಾ ಸಂಚಾಲಕ ಸೂರ್ಯಕಾಂತ ರ್ಯಾಕಲೆ, ಕಾಲೇಜು ಕಾರ್ಯದರ್ಶಿ ನಾಗರಾಜ, ಓಂಕಾರ, ಸಾಯಿ ಭೋಸ್ಲೆ, ಬಸವರಾಜ, ಸಂಗೀತಾ, ಭಾರತಿ ಮತ್ತಿತರರು ಇದ್ದರು.