ವಿಶ್ವಕ್ಕೆ ೬೦ ಮಿ. ಆಸ್ಟ್ರಾಝೆನಕಾ ಲಸಿಕೆ ಹಂಚಲಿರುವ ಅಮೆರಿಕಾ

ವಾಷಿಂಗ್ಟನ್, ಎ.೨೭- ತನ್ನ ಜನಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ಕೊರೊನಾ ಲಸಿಕೆಯನ್ನು ದಾಸ್ತಾನು ಇರಿಸಿಕೊಂಡಿರುವ ಅಮೆರಿಕಾ ಮುಂದೆ ೬೦ ಮಿಲಿಯನ್ ಆಸ್ಟ್ರಾಝೆನೆಕಾ ಲಸಿಕೆಯ ಡೋಸ್‌ಗಳನ್ನು ಇತರೆ ದೇಶಗಳಿಗೆ ನೀಡುವ ಕುರಿತು ಸದ್ಯದಲ್ಲೇ ಚಿಂತನೆ ನಡೆಸಲಿದೆ. ಈ ಕುರಿತು ಸ್ವತಹ ಶ್ವೇತಭವನವೇ ಪ್ರತಿಕ್ರಿಯೆ ನೀಡಿದ್ದು, ಇದರಿಂದ ಬಡ ರಾಷ್ಟ್ರಗಳಿಗೆ ಇದರಿಂದ ಬಹಳ ಪ್ರಯೋಜನವಾಗಲಿದೆ ಎನ್ನಲಾಗಿದೆ.
ಅಮೆರಿಕಾ ಫಸ್ಟ್ ಎಂಬ ನೀತಿಯನ್ವಯ ಕಾರ್ಯನಿರ್ವಹಿಸುವ ಅಮೆರಿಕಾ ಸರ್ಕಾರ, ಭಾರತಕ್ಕೆ ಸರಬರಾಜು ಮಾಡಬೇಕಾದ ಕೊರೊನಾ ಲಸಿಕೆಯ ಕಚ್ಛಾ ವಸ್ತುಗಳ ರಫ್ತಿಗೆ ನಿರ್ಬಂಧ ವಿಧಿಸಿತ್ತಾದರೂ ನಂತರ ಎಲ್ಲೆಡೆಯಿಂದ ಕೇಳಿ ಬಂದ ಟೀಕೆಯ ಹಿನ್ನೆಲೆಯಲ್ಲಿ ಇದನ್ನು ತೆಗೆದುಹಾಕಿತ್ತು. ಅಲ್ಲದೆ ಅಮೆರಿಕಾದಲ್ಲಿ ತನ್ನ ಜನಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್‌ಗಳ ಸಂಗ್ರಹವಿದೆ ಎಂಬ ಮಾತು ಕೂಡ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ಶ್ವೇತಭವನ ಸುಮಾರು ೬೦ ಮಿಲಿಯನ್ ಕೊರೊನಾದ ಆಸ್ಟ್ರಾಝೆನೆಕಾ ಲಸಿಕೆಗಳನ್ನು ಹೊರದೇಶಗಳಿಗೆ ನೀಡುವ ಕುರಿತು ಚಿಂತನೆ ನಡೆಸಿದೆ ಎಂದು ತಿಳಿಸಿದೆ. ಒಮ್ಮೆ ಫೆಡರಲ್ ಸುರಕ್ಷತಾ ವಿಮರ್ಶೆ (ಫೆಡರಲ್ ಸೇಫ್ಟಿ ರಿವ್ಯೂವ್ಸ್)ಯ ಅನುಮತಿ ಪಡೆದ ನಂತರ ಇತರೆ ದೇಶಗಳಿಗೆ ಹಂಚಲು ಸಹಕಾರಿಯಾಗಲಿದೆ. ಆಸ್ಟ್ರಾಝೆನೆಕಾ ಲಸಿಕೆಯು ವಿಶ್ವಾದ್ಯಂತ ಉಪಯೋಗಿಸುತ್ತಿದ್ದರೂ ಇನ್ನೂ ಕೂಡ ಅಮೆರಿಕಾದಲ್ಲಿ ಬಳಕೆಯಾಗುತ್ತಿಲ್ಲ. ಯಾಕೆಂದರೆ ಯುಎಸ್‌ನ ಆಹಾರ ಮತ್ತು ಔಷಧ ಆಡಳಿತದ ಅನುಮತಿ ಸಿಗುವವರೆಗೂ ಉಪಯೋಗಿಸಲು ಸಾಧ್ಯವಿಲ್ಲ. ಇನ್ನು ಈ ಬಗ್ಗೆ ಶ್ವೇತಭವನ ಪ್ರತಿಕ್ರಿಯೆ ನೀಡಿದೆ. ಆಸ್ಟ್ರಾಝೆನಕಾ ಲಸಿಕೆ ಬಳಕೆಗೆ ಅಮೆರಿಕಾದಲ್ಲಿ ಅನುಮತಿ ಸಿಗುವುದು ಇನ್ನೂ ಹಲವು ತಿಂಗಳುಗಳ ಕಾಲ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ನಮ್ಮಲ್ಲಿರುವ ದಾಸ್ತಾನಿರುವ ಆಸ್ಟ್ರಾಝೆನೆಕಾ ಲಸಿಕೆಗಳನ್ನು ಇತರೆ ದೇಶಗಳಿಗೆ ನೀಡುವ ಸಾಧ್ಯತೆ ಇದೆ ಎಂದು ಶ್ವೇತಭವನದ ಕೋವಿಡ್-೧೯ ಸಂಯೋಜಕರಾದ ಝೆಫ್ ಝಾಂಟ್ಸ್ ತಿಳಿಸಿದ್ದಾರೆ.