ವಿಶ್ವಕ್ಕೆ ಶಾಂತಿ ಮತ್ತು ಪ್ರೀತಿ ಬೋಧಿಸಿದ ಯೇಸು ಕ್ರಿಸ್ತರ್ ದಿವ್ಯ ಸಂದೇಶಗಳು ಎಂದೆಂದೂ ಪ್ರಸ್ತುತಃ ಸರೋಜಾ ಅಕ್ಕ

ವಿಜಯಪುರ, ಡಿ.31-ವಿಶ್ವಕ್ಕೆ ಶಾಂತಿ ಮತ್ತು ಪ್ರೀತಿಯನ್ನು ಬೋಧಿಸಿದ ಯೇಸು ಕ್ರಿಸ್ತರ್ ದಿವ್ಯ ಸಂದೇಶಗಳು ಎಂದೆಂದಿಗೂ ಪ್ರಸ್ತುತ ಎಂದು ಓಂ ಶಾಂತಿ ಕೇಂದ್ರದ ಬಿ.ಕೆ. ಸರೋಜಾ ಅಕ್ಕ ನುಡಿದರು.
ನಗರದ ಅನೌಪಚಾರಿಕ ಸಂಸ್ಥೆ ಹಾಗೂ ಸ್ಲಂ ಅಭಿವೃದ್ಧಿ ಸಮಿತಿ ವತಿಯಿಂದ ರಂಗೀನ ಮಸೀದಿ ಪ್ರದೇಶದಲ್ಲಿ ಕ್ರಿಸ್‍ಮಸ್ ದಿನಾಚರಣೆ ಹಾಗೂ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಕೇಕ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿದ ಅವರು ಕ್ರಿಸ್ತರ್ ಶಾಂತಿ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಅತಿಥಿಗಳಾಗಿದ್ದ ಸಿಸ್ಟರ್ ಶಾಂತಿಯವರು ಜಗತ್ತು ಇಂದು ಯುದ್ಧ, ಬಯೋತ್ಪಾದನೆ, ಅಶಾಂತಿಯಿಂದ ರೋಗಗ್ರಸ್ತ ಸಮಾಜ ನಿರ್ಮಾಣವಾಗಿದ್ದು ಪ್ರತಿಯೊಬ್ಬ ಮಾನವ ಜೀವಿ ದುಃಖ, ಸಂಕಟ, ಹತಾಸೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ಪ್ರತಿಯೊಬ್ಬರಿಗೂ ಮುಂದೇನು ಎಂಬ ಭಯಂಕರ ಪ್ರಶ್ನೆ ಎದುರಾಗಿದ್ದು ಈ ಅಶಾಂತಿ ತಲ್ಲಣಗಳಿಂದ ಹೊರಬರಲು ಯೇಸು ಕ್ರಿಸ್ತರ್ ಶಾಂತಿ ಸಂದೇಶಗಳನ್ನು ಅರಿತುಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದರು.
ಮುಖ್ಯ ಉಪನ್ಯಾಸಕರಾದ ನ್ಯಾಯವಾದಿ ದಾನೇಶ ಅವಟಿ ಮಾತನಾಡಿ ಮಹಾಮಾನವತಾವಾದಿ ಯೇಸು ಕ್ರಿಸ್ತರು ಬದುಕಿರುವಾಗ ಅನೇಕ ತೊಂದರೆಗಳನ್ನು ಅನುಭವಿಸಿದರು ಜಗತ್ತಿಗೆ ಶಾಂತಿಯನ್ನು ಬೋಧಿಸಿದರು. ಅವರ ದಿವ್ಯಜ್ಞಾನ ವಿಶ್ವಕ್ಕೆ ಪರಿಚಿತವಾಗಿ ಅವರ ಬೋಧನೆ ಹಾಗೂ ತತ್ವಗಳು ಜಗತ್ತಿಗೆ ಇಂದು ಹೆಚ್ಚು ಪ್ರಸ್ತುತವಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ, ನೆಮ್ಮದಿಯ ಜೀವನ ಸಾಗಿಸಬೇಕೆಂದರು.
ವಿಜಯಪುರ ಸ್ಲಂ ಅಭಿವೃದ್ದಿ ಸಮಿತಿ ಅಧ್ಯಕ್ಷ ಅಕ್ರಮ ಮಾಶಾಳಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಾಳೆಮಶಾಕ ಕುಂಟೋಜಿ, ರಮಿಜಾ ಕನ್ನೂರ, ದಸ್ತಗೀರ ಉಕ್ಕಲಿ, ಶಾಬೇದಾ ಬಸರಗಿ, ಶಕುಂತಲಾ ಮಗರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಕುಮಾರಿ ಪಲ್ಲವಿ ನಿರೂಪಿಸಿದರು. ಶಾಂತಾ ಹೊಸಮನಿ ಸ್ವಾಗತಿಸಿದರು. ಕಾಮಿನಿ ಕಸಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಚಲವಾದಿ ವಂದಿಸಿದರು.