ವಿಶ್ವಕ್ಕೆ ಕಾಯಕ ಜೀವಿಗಳ ಕೊಡುಗೆ ಅಮೋಘ

ಕಲಬುರಗಿ:ಮೇ.1: ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ವಲಯಗಳÀಲ್ಲಿ ನಿರಂತರವಾಗಿ ಸೇವೆಯನ್ನು ಸಲ್ಲಿಸುವ ಮೂಲಕ ಉತ್ಪಾದನೆ ಮತ್ತು ವಿವಿಧ ಸೇವೆಗಳನ್ನು ನೀಡುವ ಶ್ರಮಿಕ ಕಾರ್ಮಿಕ ವರ್ಗವಾದ ಕಾಯಕ ಜೀವಿಗಳು ವಿಶ್ವಕ್ಕೆ ನೂರಾರು ವರ್ಷಗಳಿಂದ ತಮ್ಮದೇ ಆದ ಅಮೋಘವಾದ ಕೊಡುಗೆಯನ್ನು ನೀಡುತ್ತಿದ್ದು, ವಿಶ್ವ ಎಂದಿಗೂ ಕೂಡಾ ಮರೆಯುವಂತಿಲ್ಲವೆಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.

   ನಗರದ ಜಗತ್ ವೃತ್ತದ ಬಸವೇಶ್ವರ ಪುತ್ತಳಿ ಬಳಿ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ'ಯ ಪ್ರಯುಕ್ತ 'ಬಸವೇಶ್ವರ ಸಮಾಜ ಸೇವಾ ಬಳಗ' ಮತ್ತು 'ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ' ಇವುಗಳ ವತಿಯಿಂದ  ಶನಿವಾರ ಬೆಳೆಗ್ಗೆ ಪೌರಕಾರ್ಮಿಕರಿಗೆ ಆಹಾರ ಧಾನ್ಯಗಳು, ದಿನಸಿ ವಸ್ತುಗಳ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.

  ಬಸವಾದಿ ಶರಣರು ಶ್ರಮಿಕ ವರ್ಗಕ್ಕೆ ಕಾಯಕ ಜೀವಿಯ ಸ್ಥಾನವನ್ನು ನೀಡಿ, ದುಡಿಯುವ ವರ್ಗ ಕನಿಷ್ಟವಲ್ಲವೆಂದು ಸಾರಿದರು. ದುಡಿಯುವ ವರ್ಗವಾದ ಶ್ರಮಿಕರಿಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿ ಮಾನವೀಯತೆಯಿಂದ ಕಾಣುವುದು ಸಮಾಜದ ಜವ್ದಾರಿಯಾಗಿದೆ. ಮಾಲಿಕನಿಗೆ ಸಂಬಳ ಕೊಡುವಷ್ಟು ಬೆಳಸಿದವನೇ ಕಾರ್ಮಿಕನೆಂಬುದು ಮರೆಯಬಾರದು. ಕಾರ್ಮಿಕರೇ ಜಗತ್ತಿನ ಮಹಾನ್ ಶಕ್ತಿಯಾಗಿದ್ದಾರೆ. ಇಂತಹ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕೆಂದರು.

ಸಮಾಜ ಸೇವಕ ಸುನೀಲಕುಮಾರ ವಂಟಿ, ಸಹ ಶಿಕ್ಷಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಶ್ರಮಿಕ ವರ್ಗಕ್ಕೆ ಬಸವೇಶ್ವರರು ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಕೊಡುಗೆ ಅನನ್ಯವಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಎಲ್ಲಾ ಕಾಯಕ ಶರಣರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಾಯ್ದೆಗಳ ಮೂಲಕ ಸಮಾನ ಕೆಲಸಕ್ಕೆ, ಸಮಾನ ವೇತನ ಕಾಯ್ದೆ, ವೇತನ ಸಹಿತ ವಾರದ ರಜೆ, ಆರೋಗ್ಯ ವಿಮೆ, ಕನಿಷ್ಟ ಕೂಲಿ ನಿಗದಿ, ಸೌಲಭ್ಯಗಳು ನೀಡುವಿಕೆ, ಮಹಿಳೆಯರಿಗೆ ಹೆರಿಗೆ ರಜೆ, ಮಹಿಳಾ ಕಲ್ಯಾಣ ನಿಧಿಗಳ ಸ್ಥಾಪನೆಗೆ ಕಾಯ್ದೆ ಮಾಡುವ ಮೂಲಕ ಕಾರ್ಮಿಕ ವರ್ಗಕ್ಕೆ ಮರೆಯಲಾರದ ಸೇವೆ ನೀಡಿದ್ದಾರೆಂದರು.

ಇದೇ ಸಂದರ್ಭದಲ್ಲಿ ಬಸವೇಶ್ವರ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ತಲಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಎಸ್.ಎಸ್.ಪಾಟೀಲ ಬಡದಾಳ, ಉದಯ ವಂಟಿ ಇದ್ದರು.