ವಿಶ್ವಕ್ಕೆ ಏಸು ಕ್ರಿಸ್ತರ ಸಂದೇಶ ಮಾದರಿ – ಅವರ ಆದರ್ಶ ಅಳವಡಿಸಿಕೊಳ್ಳಲು ಕರೆ

ಔರಾದ :ಮಾ.27:ತಾಲೂಕಿನ ಗುಡಪಳ್ಳಿ ಗ್ರಾಮದಲ್ಲಿ ಪವಿತ್ರ ಶಿಲುಬೆ ನವೀಕೃತ ದೇವಾಲಯದ ಆಶೀರ್ವಾಚನ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರಗಿಯ ಧರ್ಮಾಧ್ಯಕ್ಷರಾದ ಪೂಜ್ಯ ಶ್ರೀ ರಾಬರ್ಟ್ ಮೈಕೆಲ್ ಮಿರಾಂಡ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಬುರಿಗಿಯ ಶ್ರೇಷ್ಠ ಗುರುಗಳಾದ ಪೂಜ್ಯ ಸ್ಟ್ಯಾನಿ ಲೋಭೋ ವಹಿಸಿದ್ದರು. ಮುಖ್ಯ ಅತಿಥಿಗಳಾಗ ಭಾಗವಹಿಸಿದ್ದ ಏಕತಾ ಫೌಂಡೇಶನ್ ಅಧ್ಯಕ್ಷರಾದ ಶ್ರೀ ರವೀಂದ್ರ ಸ್ವಾಮಿಯವರು ಮಾತನಾಡಿ “ಎಲ್ಲಾ ಜಾತಿ ಜನಾಂಗದವರನ್ನು ಪರಿಗಣನೆಗೆ ತೆಗೆದುಕೊಂಡು ಔರಾದ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುವ ಕಾರ್ಯ ಮಾಡುತ್ತಿದ್ದೇನೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ದೃಷ್ಟಿಕೋನದಿಂದ ಸಾಂವಿಧಾನಿಕ ನೆಲೆಗಟ್ಟಿನ ಮೇಲೆ ಜನಸೇವೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಸುನೀಲ ಪಾಸ್ಟರ್ ಅವರಿಗೂ ನಮಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ನನಗೆ ಇಂದು ಚರ್ಚ್ ದೇವಾಲಯವರೆಗೆ ಬರಲು ಸಾಧ್ಯವಾಯಿತು ಎಂದು ತಿಳಿಸಿದರು.

ಇಡೀ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿದ ಏಸು ಕ್ರಿಸ್ತರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ಬುದ್ಧ ಬಸವ ಅಂಬೇಡ್ಕರ್ಮ, ಪೈಗಂಬರ್, ಏಸು, ಮಹಾವಿರ ಎಲ್ಲಾ ಮಹಾತ್ಮರ ಸಂದೇಶಗಳು ಹೆಚ್ಚು ಪ್ರಸಾರವಾಗಬೇಕು ಎಂಬುದು ನನ್ನ ಆಸೆಯಾಗಿದೆ. ಈ ಹಿಂದೆ ದೇವಾಲಯ, ಬೌದ್ಧಮಂದಿರ, ಚರ್ಚ್‍ಗಳು ಹಾಗೂ ದರ್ಗಾಗಳ ಏಳ್ಗೆಗೆ ಒಂದಿಷ್ಟು ಸಹಾಯ ಸಹಕಾರ ಮಾಡುವ ಪ್ರಯತ್ನ ಕುಡಾ ಮಾಡಿದ್ದೇನೆ. ನನ್ನಲ್ಲಿ ಯಾವುದೇ ಜಾತಿ ಭೇದವಿಲ್ಲ. ಎಲ್ಲರೂ ನನ್ನವರು ಎಂಬ ಭಾವನೆ ನಮ್ಮಲ್ಲಿದೆ. ಹಾಗಾಗಿಯೇ ಕ್ರೈಸ್ತ ಬಾಂಧವರು ಮುಂದಿನ ದಿನಗಳಲ್ಲಿ ನನ್ನ ಕೈಹಿಡಿದು ಮುನ್ನಡೆಸುವ ಅವಶ್ಯಕತೆ ಇದೆ. ಒಂದೇ ಒಂದು ಬಾರಿ ನನ್ನ ಕೈಹಿಡಿದರೆ ಇಡೀ ಔರಾದ ಹಾಗೂ ಕಮಲನಗರ ತಾಲೂಕಾವನ್ನು ಅಭಿವೃದ್ಧಿಯ ಪಥದೆಡೆಗೆ ಕೊಂಡೊಯ್ಯುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಚರ್ಚ್‍ನ ಬೀದರ ವಲಯದ ಕ್ಲಾರಿ ಡಿಸೋಜಾ, ಸಂತೋಷ ವಿ. ಪಾಟೀಲ, ಪಿಎಸ್‍ಐ ಸಿದ್ಧಲಿಂಗ ಸಂಗೊಟ್ಟಿ, ಪ್ರಶಾಂತಿ ಮೋನಿಸ್, ಶ್ರೀ ಪ್ರಕಾಶ ಉಜನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.