ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡಿದ ಭಗವಾನ್ ಮಹಾವೀರರ ಜಯಂತಿ

ಕೋಲಾರ,ಏ,೫- ವಿಶ್ವಕ್ಕೆ ಅಹಿಂಸೆ ಹಾಗೂ ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರ ಜಯಂತಿಗೂ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿತ್ತಾದರೂ, ಸಮುದಾಯದ ಜನತೆ ಅನುಮತಿ ಪಡೆದುಕೊಂಡು ಸಂಪ್ರದಾಯ ಬದ್ದವಾಗಿ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಜಯಂತಿ ಆಚರಿಸಿದರು.
ಪ್ರತಿವರ್ಷದ ಸಂಪ್ರದಾಯದಂತೆ ಜೈನ ಬಂಧುಗಳು ಇಡೀ ಮೆರವಣಿಗೆಯ ಉಸ್ತುವಾರಿಯನ್ನು ವಹಿಸಿದ್ದು, ಕೇಸರಿ ಪೇಟ ತೊಟ್ಟ ನೂರಾರು ಜೈನ ಬಂಧುಗಳು, ಮಹಿಳೆಯರೊಂದಿಗೆ ವೀರ ಮತ್ತು ರಾಜ ಎರಡು ಕುದುರೆಗಳೊಂದಿಗೆ ಮಹಾವೀರರ ಬೆಳ್ಳಿರಥದ ಭವ್ಯ ಮೆರವಣಿಗೆಗೆ ಜಿಲ್ಲಾ ಜೈನ ಸಂಘದ ಅಧ್ಯಕ್ಷ ಜಯಂತಿಲಾಲ್ ಚಾಲನೆ ನೀಡಿದರು.
ಸಮಾಜದಲ್ಲಿ ಶಾಶ್ವತ ಶಾಂತಿ, ಸಂಯಮ ಮೂಡಲು ಮಹಾವೀರರ ತತ್ವಗಳು ಇಂದು ಪ್ರಸ್ತುತವಾಗಿವೆ, ಅವರ ಹಾಕಿಕೊಟ್ಟ ಹಾದಿಯಲ್ಲಿ ಸಮಾಜ ಸಾಗಬೇಕಾಗಿದೆ ಎಂದು ತಿಳಿಸಿದ ಅವರು, ಬಂಧುಗಳಿಗೆ ಶುಭ ಕೋರಿದರು.
ವಿವಿಧ ಹೂವುಗಳಿಂದ ಅಲಂಕರಿಸಿದ್ದ ಮಹಾವೀರರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿದ ಬಳಿಕ ನಾದಸ್ವರ ಹಾಗೂ ಜಯ ಘೋಷಣೆಯೊಂದಿಗೆ ಅಮ್ಮವಾರಿಪೇಟೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.
ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕ, ಯುವತಿಯರು ಬ್ಯಾಂಡ್‌ಸೆಟ್ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಮಹಾತ್ಮಗಾಂಧಿ ಚೌಕ, ದೊಡ್ಡಪೇಟೆ ರಸ್ತೆ, ಬ್ರಾಹ್ಮಣರ ಬೀದಿ, ಕಾಳಮ್ಮ ದೇವಸ್ಥಾನದ ಮಾರ್ಗವಾಗಿ ಸಾಗಿದ ಮೆರವಣಿಗೆ ಅಮ್ಮವಾರಿಪೇಟೆಯ ಭಗವಾನ್ ಮಹಾವೀರ ಜೈನ ಮಂದಿರದ ಬಳಿ ಕೊನೆಗೊಂಡಿತು.
ಜೈನ ಮಂದಿರದಲ್ಲಿ ಪ್ರಾರ್ಥನೆ, ಅಭಿಷೇಕ, ಪ್ರವಚನ ಮೊದಲಾದ ಕಾರ್ಯಕ್ರಮಗಳು ನಡೆದವು. ಜೈನ ಸಮಾಜ ಬಾಂಧವರು ಕುಟುಂಬ ಸದಸ್ಯರೊಂದಿಗೆ ಮಂದಿರಕ್ಕೆ ಆಗಮಿಸಿ ಮಹಾವೀರರಿಗೆ ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದ ವಸ್ತುಗಳಿಂದ ವಿಶೇಷ ನೈವೇದ್ಯ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಮಂದಿರದಲ್ಲಿ ನಡೆದ ಸಾಮೂಹಿಕ ಭಜನೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ರಾಘವೇಂದ್ರಸ್ವಾಮಿ ಮಠದಲ್ಲಿ ಅನ್ನದಾನ ನಡೆಸಲಾಯಿತು. ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಮಾಂಸದ ಅಂಗಡಿಗಳನ್ನು ಇಡೀ ದಿನ ಮುಚ್ಚಲಾಗಿತ್ತು.
ಮೆರವಣಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಜುವೇರಿಲಾಲ್, ಲಲಿತ್ ಕುಮಾರ್, ನೀರಜ್‌ಕುಮಾರ್, ದಿಲೀಪ್ ಕುಮಾರ್, ಸಾಗರ್, ಅಮಿತ್, ಮುಖಂಡರಾದ ರಂಜಿತ್, ರಮೇಶ್,ವಿಕ್ಕಿ ಅಶೋಕ್, ರತನ್ ಲೋಕ್ ಅಂಗಡಿಯ ಇಂದ್ರಚಂದ್, ಲಾಲ್ ಚಂದ್, ಸುನೀಲ್‌ಕುಮಾರ್, ಮಹೇಂದ್ರ ಕುಮಾರ್, ಉತ್ತಮ್ ಮತ್ತಿತರರು ಉಪಸ್ಥಿತರಿದ್ದರು.