ವಿಶ್ವಕರ್ಮ ಸಮಾಜವನ್ನು ಪ.ಪಂಗಡಕ್ಕೆ ಸೇರಿಸಲು ಆಗ್ರಹ

ಧಾರವಾಡ,ನ21 : ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಯಾವುದೇ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ತೋರುತ್ತಿಲ್ಲ. ನಾನು ವಿಧಾನ ಪರಿಷತ್ ಸದಸ್ಯನಾಗಿದ್ದರೂ ಸಮಾಜಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ ನಂಜುಂಡಿ ಅಸಹಾಯಕತೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿ ಸುಮಾರು 40 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮಾಜಕ್ಕೆ 2 ಎ ಮೀಸಲಾತಿ ನೀಡಲಾಗಿದೆ. ಆದರೆ ಈ ಸಮಾಜ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಲ್ಲಿ ಒಂದು ಕುಲ ಕಸುಬು ನಂಬಿಕೊಂಡು ಜೀವನ ನಡೆಸುತ್ತಿದೆ. ವಿಶ್ವಕರ್ಮ ಸಮಾಜವನ್ನು ಕುಲಶಾಸ್ತ್ರೀಯ ಅಧ್ಯಯನ ಮಾಡಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.
ವಿಶ್ವಕರ್ಮ ಸಮಾಜಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುವುದರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗುಲ್ಬರ್ಗಾ ಜಿಲ್ಲೆಯಿಂದ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲು ವಿಶ್ವಕರ್ಮ ಮಹಾಸಭಾ ಪದಾಧಿಕಾರಿಗಳ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ನಮ್ಮ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸುವಂತೆ ಕೇಳಿದ್ದೇವೆ. ಈ ಕುರಿತು ನಾವು ಗಂಭೀರವಾಗಿ ಪರಿಗಣಿಸಬೇಕು ನಾವು ಅರ್ಹತೆ ಇದ್ದವರು ನಮ್ಮ ಸಮಾಜಕ್ಕೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ನಾವು ಬ್ರಾಹ್ಮಣರಲ್ಲ ಬ್ರಾಹ್ಮಣರಿಗಿಂತ ಶ್ರೇಷ್ಠರು
ಮೂಲತಃ ವಿಶ್ವಕರ್ಮ ಸಮಾಜ ವಿಶ್ವ ಬ್ರಾಹ್ಮಣ ಎಂಬ ಪರಿಕಲ್ಪನೆ ಇದೆ. ನಾನು ಅಧ್ಯಯನ ಮಾಡಿದ ಪ್ರಕಾರ ಎಲ್ಲ ಕುಲ ದೇವರು ಮಾಡಿಕೊಡುವ, ಶಿಲ್ಪಕಲೆ ಬಿಡಿಸುವ ಹಾಗೂ ತಾಮ್ರದ ವಿನ್ಯಾಸ ಹಾಗೂ ಮೂರ್ತಿ ತಯಾರಿಸುವ ಸಮಾಜ ವಿಶ್ವಕರ್ಮ. ನಾವು ಬ್ರಾಹ್ಮಣರಲ್ಲ ಬ್ರಾಹ್ಮಣರಿಗಿಂತ ಶ್ರೇಷ್ಠರು ಬ್ರಾಹ್ಮಣರಿಗೆ ಮೂರ್ತಿ ಆರಾಧನೆ ಮಾಡಲು ನಾವು ಮೂರ್ತಿ ಮಾಡಿಕೊಡುವ ಕುಲ ಕಸಬು ಆಧಾರಿತ ಸಮಾಜ, ಅಲೆಮಾರಿ ಬುಡಕಟ್ಟು ಜನಾಂಗದವರು ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಕಾಳಪ್ಪ ಬಡಿಗೇರ, ಸುರೇಶ ಬಡಿಗೇರ, ಎಂ ಬಿ ಬಡಿಗೇರ, ಮಾನಪ್ಪ ಪತ್ತಾರ, ಕುಬೇರಪ್ಪ ಬಡಿಗೇರ ಸೇರಿದಂತೆ ಹಲವರು ಇದ್ದರು.