ವಿಶ್ವಕರ್ಮ ಸಮಾಜಕ್ಕೆ ಎಸ್.ಟಿ ಮೀಸಲಾತಿ ಕೊಡಿ

ಸಿರವಾರ,ಜ.೯- ವಿಶ್ವಕರ್ಮ ಸಮಾಜಕ್ಕೆ ಎಸ್.ಟಿ ಮೀಸಲಾತಿ ಘೋಷಣೆ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು. ನಮ್ಮ ಸಮಾಜದ ಹೋರಾಟಗಾರರ ರಕ್ತದ ಕಣ ಕಣದಲ್ಲೂ ಮೀಸಲಾತಿ ಕೂಗು ಇದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ ಮಳವಳ್ಳಿ ತಿಳಿಸಿದರು. ಅವರು ಇಂದು ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿಶ್ವಕರ್ಮ ಸಮಾಜಕ್ಕೆ ಎಸ್.ಟಿ ಮೀಸಲಾತಿ ನೀಡಬೇಕು ಆಗ್ರಹಿಸಿ ಲಿಂಗಸೂಗುರಿನಿಂದ ರಾಯಚೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿಶ್ವಕರ್ಮ ಸಮಾಜವು ರಾಜ್ಯದಲ್ಲಿ ೪೦ ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಆದರೆ, ನಾವು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದೇವೆ. ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು ನಮ್ಮನ್ನು ಕೇವಲ ಮತ ಬ್ಯಾಂಕ್‌ಗಾಗಿ ಉಪಯೋಗಿ ಮಾಡಿಕೊಳ್ಳುತ್ತಿವೆ ಹೊರತು, ಯಾವುದೇ ಸೌಲಭ್ಯಗಳನ್ನು ನೀಡಲು ಮುಂದಾಗಿಲ್ಲ.
ಬೇರೆ ರಾಜ್ಯದಲ್ಲಿ ಈಗಾಗಲೇ ಎಸ್.ಟಿ ಮೀಸಲಾತಿಯನ್ನು ನೀಡಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲೂ ವಿಶ್ವಕರ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಅದರ ಮೊದಲ ಭಾಗವಾಗಿ ಲಿಂಗಸೂಗೂರಿನಿಂದ ರಾಯಚೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ ಪಾದಯಾತ್ರೆ ಮೂಲಕ ಹೋರಾಟ ಮಾಡಲಾಗುವುದು. ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷರಾದ ಕೆ.ಪಿ.ನಂಜುಂಡಿ ಹಾಗೂ ಸಮಾಜದ ಗುರುಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಈಗಾಗಲೇ ರಾಜ್ಯದ ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಎಸ್.ಟಿ ಮೀಸಲಾತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಬೀದರ್‌ನಿಂದ ಬೆಂಗಳೂರುವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು. ಕುಲಶಾಸ್ತ್ರ ಅಧ್ಯಯನ ಮಾಡಲು ರಾಜ್ಯ ಸರ್ಕಾರವು ಈಗಾಗಲೇ ಶಿಫಾರಸ್ಸು ಮಾಡಿದೆ. ಕೂಡಲೆ ಅದನ್ನು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ಮಾರುತಿ ಬಡಿಗೇರ, ಪ್ರಧಾನ ಕಾರ್ಯದರ್ಶಿ ಲೋಹಿತ್ ಗುಲ್ಬರ್ಗ, ಬ್ರಹ್ಮ ಗಣೇಶ, ಆನಂದ್ ಲಂಕೇಶ್ವರ, ವಿಜಯ ಬಡಿಗೇರ್, ಕಾಳಪ್ಪ ಬಡಿಗೇರ್, ಸೋಮಣ್ಣ ಗಾಣದಾಳ, ಪ್ರಭುಸ್ವಾಮಿ, ಮಂಜುಳಾ ಬಡಿಗೇರ್, ಕಾಳಪ್ಪ ಬಡಿಗೇರ್, ಮನೋಹರ ಬಡಿಗೇರ್, ಸಿದ್ಧರಾಮೇಶ್ವರ ಪತ್ತಾರ್, ಸೂಗಪ್ಪ ಬಡಿಗೇರ್, ದೇವರಾಜ ಬಡಿಗೇರ್, ಗಂಗಾಧರ ಬಡಿಗೇರ್ ಸೇರಿದಂತೆ ಲಿಂಗಸೂಗೂರು, ಮಸ್ಕಿ, ಕವಿತಾಳ ಪಟ್ಟಣಗಳ ಮುಖಂಡರು ಇದ್ದರು.