ವಿಶ್ವಕರ್ಮ ಸಮಾಜಕ್ಕೆ ಅನ್ಯಾಯ ಮಾಡಿದ ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ತಕ್ಕ ಪಾಠ: ಕಲ್ಲೂರ್

ಕಲಬುರಗಿ.ಏ.08: ರಾಜ್ಯದಲ್ಲಿ ಬಹುಸಂಖ್ಯಾತವಾಗಿರುವ ವಿಶ್ವಕರ್ಮ ಸಮಾಜವು ಕಾಯಕ ಪ್ರಿಯ ಸಮಾಜವಾಗಿದೆ. ಸದಾ ಕಾಯಕದಲ್ಲಿರುವ ಸಮಾಜದ ಕೆಲವೇ ಕೆಲವು ವ್ಯಕ್ತಿಗಳು ಇಂದು ರಾಜಕೀಯದಲ್ಲಿದ್ದಾರೆ. ಆದರೆ ವಿಶ್ವಕರ್ಮ ಸಮಾಜದವನ್ನು ಕಾಂಗ್ರೆಸ್ ಪಕ್ಷ ದುಡಿಸಿಕೊಂಡು ಚುನಾವಣೆಯಲ್ಲಿ ತಕ್ಕ ಸ್ಥಾನಮಾನ ನೀಡದೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ವಿಶ್ವಕರ್ಮ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ್ ಅವರು ಎಚ್ಚರಿಸಿದ್ದಾರೆ.
ವಿಶ್ವಕರ್ಮ ಸಮುದಾಯದಲ್ಲಿ ಅನೇಕ ಒಳಪಂಗಡಗಳಿವೆ. ಎಲ್ಲರೂ ಕಾಯಕ ಪ್ರಿಯರು, ರಾಜಕೀಯವಾಗಿ ಆಗಲಿ ಅಥವಾ ಇನ್ನಾವುದೋ ಹೋರಾಟದ ಮುಖಾಂತರವಾಗಿ ಶಾಸನ ಬದ್ಧ ತಮ್ಮ ಅಧಿಕಾರಕ್ಕಾಗಿ ಎಂದು ಮುಂದೆ ಬಂದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ವಿಶ್ವಕರ್ಮ ಸಮುದಾಯಗಳ ಅನೇಕರಿದ್ದಾರೆ. ಅವರಲ್ಲಿ ಕೆಲವೇ ಕೆಲವು ಜನಪ್ರಿಯ ನಾಯಕರಾಗಿದ್ದರು. ಅವರಲ್ಲಿ ಚಿತ್ರದುರ್ಗದ ರಘು ಆಚಾರ್ಯ ಅವರು ಮುಂಚೂಣಿ ನಾಯಕರು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ವಿಶ್ವಕರ್ಮ ಸಮುದಾಯಕ್ಕೆ ಸೀಮತವಾಗಿರದೇ ಎಲ್ಲ ಸಮುದಾಯಗಳ ಜನಪ್ರಿಯ ನಾಯಕರಾಗಿದ್ದಾರೆ. ಈ ಬಾರಿ ವಿಧಾನ ಸಭೆಗೆ ಸ್ಪರ್ಧೆ ಮಾಡಬೇಕು ಎಂದು ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕೆಪಿಸಿಸಿಯಲ್ಲಿ ಅರ್ಜಿ ಕೂಡ ಹಾಕಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಅವರನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಸಮುದಾಯದ ವಿಶೇಷವಾಗಿ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ವಿಶ್ವಕರ್ಮ ಮುಖಂಡ ಕೆ.ಪಿ. ನಂಜುಂಡಿ ಅವರು ಕೂಡ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರಳು ದುಡಿದಿದ್ದಾರೆ. ಅವರನ್ನು ಕೂಡ ಕಡೆಗಣಿಸಿದ್ದರಿಂದ ಅವರು ಇಂದು ಬೆರೆ ಪಕ್ಷದಲ್ಲಿ ಗುರುತಿಸಿ ಸೂಕ್ತ ಸ್ಥಾನಮಾನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
2023ರ ರಾಜ್ಯ ವಿಧಾ ಸಭೆಯ ಚುನಾವಣೆಯಲ್ಲಿ ಚಿತ್ರದುರ್ಗ ನಗರ ಕ್ಷೇತ್ರದಿಂದ ರಘು ಆಚಾರ್ಯ ಅವರ ಸ್ಪರ್ಧೆ ಖಚಿತ ಎನ್ನುವ ಮಾತುಗಳ ಮತದಾರಲ್ಲಿ ಬಹು ಚರ್ಚಿತ ವಿಷಯವಾಗಿತ್ತು. ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ದವರು ರಘು ಆಚಾರ್ ಅವರನ್ನು ಕೈ ಬಿಟ್ಟಿದ್ದು ಸಮುದಾಯದ ಮತದಾರರಿಗೆ ತೀವ್ರ ನಿರಾಶೆಯಾಗಿದೆ. ಮೇ 10ರಂದು ನಡೆಯುವ ಮತದಾನಲ್ಲಿ ವಿಶ್ವ ಕರ್ಮ ಸಮುದಾಯಗಳ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.