ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆಗೆ ಸಿಎಂ ಭರವಸೆ

ಬೆಂಗಳೂರು.ಸೆ.೧೯:ರಾಜ್ಯದಲ್ಲಿ ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ,ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಇರಬೇಕಾಗುತ್ತದೆ. ಕರಕುಶಲಕರ್ಮಿಗಳಿಗೆ ಇಲಾಖೆ ರಚಿಸಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲನೆ ಮಾಡಲಾಗುವುದು. ನೇಕಾರರಿಗೆ ಇರುವ ಸೌಲಭ್ಯಗಳ ಮಾದರಿಯಲ್ಲಿ ಸೌಲಭ್ಯಗಳು ಹಾಗೂ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಇದ್ದು ಅನುದಾನ ಹೆಚ್ಚು ಮಾಡಲಾಗುವುದು ಎಂದು ಭರವಸೆ ನೀಡಿದರು.
ನಾವು ಸಮಾಜದಲ್ಲಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸಬೇಕು. ಹಾಗೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ. ನಾವು ಎಷ್ಟು ದಿನ ಬದುಕಿರುತ್ತೇವೆ ಎನ್ನುವುದು ಮುಖ್ಯ ಅಲ್ಲ. ರಾಷ್ಟ್ರ ಕವಿ ಕುವೆಂಪು ಹೇಳುವಂತೆ ಎಲ್ಲ ರೂ ವಿಶ್ವಮಾನವರಾಗಿಯೇ ಹುಟ್ಟಿದರೂ, ಬೆಳೆಯುವಾಗ ಅಲ್ಪ ಮಾನವರಾಗುತ್ತಾರೆ. ನಾವು ವಿಶ್ವಮಾನವರಾಗಲು ಪ್ರಯತ್ನ ಮಾಡುವುದೇ ಸಮಾಜಕ್ಕೆ ಕೊಡುವ ಕೊಡುಗೆ. ಬಸವಣ್ಣ ಹೇಳಿದಂತೆ ದಯೆಯೇ ಧರ್ಮದ ಮೂಲ. ಎಂದರು.
ಕನ್ನಡ, ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ನಿವೃತ್ತ ಕಾರ್ಯದರ್ಶಿ ಕೆ.ಎಸ್ ಪ್ರಭಾಕರ , ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೆ.ಎಂ.ಮಂಜುನಾಥ, ಪರ್ತಕರ್ತರು& ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಿತಿ ಯ ರಾಜ್ಯ ಸಂಚಾಲಕರಾದ ವಿಜಯಕುಮಾರ ಪತ್ತಾರ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಮಾಜಿ ಅಧ್ಯಕ್ಷರುಗಳಾದ , ಶ್ರೀನಿವಾಸಚಾರ್ , ಸತ್ಯವತಿ, ಬಾಬು ಪತ್ತಾರ, ಲೋಹಿತ ಕಲ್ಲೂರ ವಿಶ್ವಕರ್ಮ ಹಾಗೂ ಉಪನ್ಯಾಸ ಮಾಡಿದ ಹಂಪಿ ವಿಶ್ವ ವಿದ್ಯಾಲಯದ ಡಾ: ವಿರೇಶ ಬಡಿಗೇರ ಸಮಾಜ ಇನ್ನುಳಿದ ಮುಖಂಡರು ಇದ್ದರು.