ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ ಮೊದಲ ಪಂದ್ಯದಲ್ಲಿ ಕಿವೀಸ್-ಇಂಗ್ಲೆಂಡ್ ಹಣಾಹಣಿ

ದೆಹಲಿ, ಜೂ.೨೭- ಬಹುನಿರೀಕ್ಷಿತ ವಿಶ್ವಕಪ್-೨೦೨೩ರ ಸಂಪೂರ್ಣ ವೇಳಾಪಟ್ಟಿ ಮಂಗಳವಾರ ಮಧ್ಯಾಹ್ನ ಮುಂಬೈನಲ್ಲಿ ಬಿಡುಗಡೆಗೊಂಡಿದೆ. ಅಕ್ಟೋಬರ್ ೫ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಕಳೆದ ಬಾರಿ ಫೈನಲಿಸ್ಟ್ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಕಾದಾಟದ ಮೂಲಕ ಟೂರ್ನಿಗೆ ಶುಭಾರಂಭ ಲಭಿಸಲಿದೆ. ಅತ್ತ ಚೆನ್ನೈನ ಚಿಪಾಕ್ ಮೈದಾನದಲ್ಲಿ ಅಕ್ಟೋಬರ್ ೮ರಂದು ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸುವ ಮೂಲಕ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಮುಖ್ಯ ಸುತ್ತಿನಲ್ಲಿ ಪ್ರತಿಯೊಂದು ತಂಡಗಳು ಉಳಿದ ೯ ತಂಡಗಳ ವಿರುದ್ಧ ರೌಂಡ್ ರಾಬಿನ್ ಅನ್ವಯ ಕಾದಾಟ ನಡೆಸಲಿದ್ದು, ಈ ಪೈಕಿ ಹೆಚ್ಚು ಅಂಕ ಗಳಿಸುವ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ೨೦೧೯ರ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್ ಹಾಗೂ ಕಿವೀಸ್ ನಡುವೆ ಅಹ್ಮದಾಬಾದ್‌ನಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯಗಳು ನಡೆಯಲಿದೆ. ಇನ್ನು ಭಾರತದ ಪಂದ್ಯಗಳತ್ತ ಗಮನ ಹರಿಸಿದರೆ ಅಕ್ಟೋಬರ್ ೮ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಕಾದಾಟ ನಡೆಸಲಿದ್ದರೆ ಅ.೧೧ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಅ.೧೫ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಕುತೂಹಲ ಪಂದ್ಯದಲ್ಲಿ ಭಾರತ ಪಡೆ ಆಡಲಿದ್ದು, ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಪುಣೆಯಲ್ಲಿ ಅ.೧೯ರಂದು ಬಾಂಗ್ಲಾ ವಿರುದ್ಧ ಕಾದಾಟ ನಡೆಯಲಿದ್ದರೆ ಅ.೨೨ರಂದು ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಕಾಳಗ ನಡೆಯಲಿದೆ. ಉಳಿದಂತೆ ಅ.೨೯ರಂದು ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದ್ದರೆ ನವೆಂಬರ್ ೨ರಂದು ಟೂರ್ನಿಗೆ ಎರಡನೇ ಸ್ಥಾನಿಯಾಗಿ ಅರ್ಹತೆ ಗಳಿಸುವ ತಂಡದ ಜೊತೆ ಟೀಮ್ ಇಂಡಿಯಾ ಆಡಲಿದೆ. ನವೆಂಬರ್ ೫ರಂದು ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದರೆ ನವೆಂಬರ್ ೧೧ರಂದು ಟೂರ್ನಿಗೆ ಅರ್ಹತೆ ಗಳಿಸುವ ಮೊದಲ ಸ್ಥಾನದ ತಂಡದ ವಿರುದ್ಧ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ಆಡಲಿದೆ. ಇನ್ನು ಎರಡೂ ಸೆಮಿಫೈನಲ್ ಪಂದ್ಯಗಳು (ನವೆಂಬರ್ ೧೫ ಹಾಗೂ ೧೬) ಮುಂಬೈನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದ್ದರೆ ನವೆಂಬರ್ ೧೯ರಂದು ನರೇಂದ್ರ ಮೋದಿ ಮೈದಾನದಲ್ಲಿ ಫೈನಲ್ ಕಾದಾಟ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು ೪೫ ಲೀಗ್ ಪಂದ್ಯಗಳು ನಡೆಯಲಿದೆ.
ಪಾಕ್ ಮನವಿಗಳ ತಿರಸ್ಕಾರ
ಇನ್ನು ಭಾರತ ವಿರುದ್ಧದ ಮೊದಲ ಪಂದ್ಯವನ್ನು ಅಹ್ಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಆಡಲ್ಲ ಎಂದು ಭಿನ್ನ ರಾಗ ತೋಡಿಕೊಂಡಿದ್ದ ಪಾಕಿಸ್ತಾನ ಮನವಿಯನ್ನು ಐಸಿಸಿ ಹಾಗೂ ಬಿಸಿಸಿಐ ತಿರಸ್ಕರಿಸಿದೆ. ಅಲ್ಲದೆ ಸ್ಪಿನ್ ಸ್ನೇಹಿ ಚೆನ್ನೈನಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೂಡ ಆಡಲ್ಲ, ಬದಲಾಗಿ ಬೇರೆ ಮೈದಾನದ ವ್ಯವಸ್ಥೆ ಮಾಡಿ ಎಂಬ ಬಗ್ಗೆ ಕೂಡ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಪಸ್ವರ ಎಬ್ಬಿಸಿತ್ತು. ಸದ್ಯ ಈ ಮನವಿಯನ್ನು ಕೂಡ ಐಸಿಸಿ, ಬಿಸಿಸಿಐ ತಿರಸ್ಕರಿಸಿದೆ. ಎಲ್ಲರಿಗೂ ತಿಳಿದಿರುವಂತೆ ಚೆನ್ನೈ ಪಿಚ್ ಸ್ಪಿನ್ನರ್ಸ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಅದೂ ಅಲ್ಲದೆ ಅಫ್ಘಾನ್ ತಂಡದಲ್ಲಿ ಘಟಾನುಘಟಿ ಸ್ಪಿನ್ನರ್ಸ್‌ಗಳೇ ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಭಯದಿಂದ ಪಾಕ್ ಈ ಭಿನ್ನ ಮನವಿಯನ್ನು ಮುಂದಿರಿಸಿತ್ತು. ಇದೀಗ ಅಂತಿಮವಾಗಿ ಪಾಕ್‌ನ ಎರಡೂ ಬೇಡಿಕೆಗಳನ್ನು ತಿರಸ್ಕರಿಸಲಾಗಿದೆ.