ವಿಶೇಷ ಸ್ಥಾನಮಾನ ರದ್ದು: ಅರ್ಜಿಗಳ ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ

ನವದೆಹಲಿ,ಸೆ.5- ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿ ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ 16 ದಿನಗಳ ಕಾಲ ಅರ್ಜಿದಾರರು ಮತ್ತು ಕೇಂದ್ರ ಸರ್ಕಾರದ ಎರಡೂ ಕಡೆಯ ವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ.

ಅರ್ಜಿದಾರರು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಬಳಸಲಾದ ಜಮ್ಮು ಮತ್ತು ಕಾಶ್ಮೀರ ಮರು-ಸಂಘಟನೆ ಕಾಯ್ದೆಯನ್ನು ಸಹ ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸೇರಿದಂತೆ ಐವರು ನ್ಯಾಯಾಧೀಶರು, ಮಹತ್ವದ ಪ್ರಕರಣವನ್ನು ಮೂರು ವರ್ಷಗಳಿಂದ ಬಾಕಿ ಇದ್ದ ಎಲ್ಲಾ ಅರ್ಜಿಯನ್ನು ತಂಡವಾಗಿ ಕೈಗೆತ್ತಿಕೊಂಡು 16 ದಿನಗಳ ಕಾಲ ಎರಡೂ ಕಡೆಯ – ಅರ್ಜಿದಾರರು ಮತ್ತು ಕೇಂದ್ರ ಸರ್ಕಾರದ ವಾದ ಆಲಿಸಿ, ತೀರ್ಪು ಕಾಯ್ದಿರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ರದ್ದತಿಯನ್ನು ಪ್ರಶ್ನಿಸಿದ ಅರ್ಜಿದಾರರಲ್ಲಿ ಒಬ್ಬರಾದ ಹಸ್ನೈನ್ ಮಸೂದಿ “ನಾವು ಮಾಡಿದ ವಾದಗಳಿಂದ ತೃಪ್ತರಾಗಿದ್ದೇವೆ. ಎಲ್ಲಾ ಅಂಶಗಳನ್ನು ಮನವರಿಕೆಯಾಗುವಂತೆ ವಾದಿಸಲಾಗಿದೆ” ಎಂದು ಹೇಳಿದರು.

ಆಗಸ್ಟ್ 2 ರಂದು ವಿಚಾರಣೆ ಪ್ರಾರಂಭವಾಗಿತ್ತು. 16 ದಿನಗಳ ಅವಧಿಯಲ್ಲಿ, ಸುಪ್ರೀಂ ಕೋರ್ಟ್ ಎರಡೂ ಕಡೆಯಿಂದ ಪ್ರಕರಣದ ಬಗ್ಗೆ ವ್ಯಾಪಕ ವಾದ ಮತ್ತು ಚರ್ಚೆಗಳಿಗೆ ಸಾಕ್ಷಿಯಾಯಿತು

ಅರ್ಜಿದಾರರ ಕಡೆಯಿಂದ ವಕೀಲರು ಮೊದಲ ಒಂಬತ್ತು ದಿನಗಳವರೆಗೆ ವಾದಿಸಿದರು ಇದಕ್ಕೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರ ಆರ್ಟಿಕಲ್ 370 ರ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ‘ಮಾನಸಿಕ ದ್ವಂದ್ವತೆ’ ಪರಿಹರಿಸಿದೆ ಎಂದು ವಾದಿಸಿತ್ತು.

ಅಲ್ಲಿನ ಜನರ ವಿರುದ್ಧ ತಾರತಮ್ಯದ ಭಾವನೆ ಇರುವುದರಿಂದ ಅದನ್ನು ಮೊದಲೇ ರದ್ದುಗೊಳಿಸಲಾಗಿಲ್ಲ. ಕೇಂದ್ರ ಸರ್ಕಾರ ತನ್ನ ಕ್ರಮ ಸಮರ್ಥಿಸಿಕೊಂಡಿದೆ.

ಭಾರತದ ಸಂವಿಧಾನದ ತಯಾಕರು ಆರ್ಟಿಕಲ್ 370 ಅನ್ನು ‘ತಾತ್ಕಾಲಿಕ’ ನಿಬಂಧನೆ ಎಂದು ಪರಿಗಣಿಸಿದ್ದಾರೆ ಎಂದು ಕೇಂದ್ರ ಸರ್ಕಾರ ವಾದಿಸಿತು.

ಕಪಿಲ್ ಸಿಬಲ್, ಜಾಫರ್ ಶಾ, ಗೋಪಾಲ್ ಸುಬ್ರಮಣಿಯಂ, ರಾಜೀವ್ ಧವನ್, ದುಷ್ಯಂತ್ ದವೆ, ದಿನೇಶ್ ದ್ವಿವೇದಿ ಸೇರಿದಂತೆ ಹಿರಿಯ ವಕೀಲರು ಅರ್ಜಿದಾರರ ಪರ ವಾದ ಮಂಡಿಸಿದ್ದರು.

ಕೇಂದ್ರ ಸರ್ಕಾರದ ಕಡೆಯಿಂದ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರು ಕೇಂದ್ರದ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ.