ವಿಶೇಷ ಸಂಸತ್ ಅಧಿವೇಶನ ಶಿವಸೇನೆ ಕಿಡಿ

ಮುಂಬೈ,ಸೆ.೧- ಗಣೇಶ ಉತ್ಸವ ಸೇರಿದಂತೆ ಹಬ್ಬದ ಋತುವಿನಲ್ಲಿ ವಿಶೇಷ ಸಂಸತ್ ಅಧಿವೇಶನ ಕರೆದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶಿವಸೇನೆ ಉದ್ದವ್ ಠಾಕ್ರೆ ಬಣ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿಯ ನೀತಿ ಮತ್ತು ರೀತಿ ನೋಡಿದರೆ ಇದೇನಾ ಹಿಂದುತ್ವ ಎಂದು ನೇರವಾಗಿಯೇ ಶಿವಸೇನೆ ಉದ್ದವ್ ಠಾಕ್ರೆ ಬಣದ ನಾಯಕ ಅರವಿಂದ್ ಸಾವಂತ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಬ್ಬದ ಋತುವಿನಲ್ಲಿ ಅಧಿವೇಶನ ನಡೆಸಿದ ಉದಾಹರಣೆಯೇ ಇಲ್ಲ . ಇತಿಹಾಸದಲ್ಲಿ ಈ ರೀತಿಯ ಯಾವುದೇ ವಿಶೇಷ ಅಧಿವೇಶನ ಹಬ್ಬದ ಸಂದರ್ಭದಲ್ಲಿ ನಡೆದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಇತಿಹಾಸದಲ್ಲಿ ಉತ್ಸವದ ಸಂದರ್ಭದಲ್ಲಿ ಯಾವುದೇ ಅಧಿವೇಶನ ನಡೆದಿಲ್ಲ. ಗಣಪತಿ ಹಬ್ಬ ಆಚರಿಸುವ ದಿನಗಳಲ್ಲಿ ಅವರು ಅಧಿವೇಶನಗಳನ್ನು ನಡೆಸುತ್ತಿದ್ದಾರೆ. ಇದು ಅವರ ಹಿಂದುತ್ವವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ೧೮ ರಿಂದ ೨೨ ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಐದು ಅಧಿವೇಶನದ ಸಮಯದಲ್ಲಿ ಸೆಪ್ಟಂಬರ್ ೧೯ರಂದು ಈ ವರ್ಷ ಗಣೇಶ ಚತುರ್ಥಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ದ ಆರೋಪಿಸಿದ್ದಾರೆ.
ವಿಶೇಷ ಅಧಿವೇಶನದ ಘೋಷಣೆ ರಾಜಕೀಯ ವಲಯಗಳಲ್ಲಿ ಅಚ್ಚರಿ ಮೂಡಿಸಿದೆ, ಈ ವರ್ಷದ ಕೊನೆಯಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷಗಳು ಸಜ್ಜಾಗುತ್ತಿವೆ. ಸಾಮಾನ್ಯವಾಗಿ ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ.
ವಿಧಾನಸಭೆ ಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ಹಲವು ಮಹತ್ವದ ಮಸೂದೆ ಮಂಡಿಸಲು ಸರ್ಕಾರ, ಈ ವಿಶೇಷ ಅಧಿವೇಶನ ಕರೆದಿದೆ ಎನ್ನಲಾಗಿದೆ.