ವಿಶೇಷ ವರದಿ ಬರಿದಾದ ಉಲ್ಲಾಳು ಕೆರೆ ಜಲಚರಗಳಿಗೆ ಸಂಕಷ್ಟ

ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಉಲ್ಲಾಳು ಕೆರೆಯಲ್ಲಿ ನೀರಿಲ್ಲದೆ ಒಣಗಿ ನಿಂತಿದ್ದು, ವಿವಿಧ ಕಡೆಗಳಿಂದ ವಲಸೆ ಬರುವ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ.

ಬೆಂಗಳೂರು, ಅ.೧೯- ರಾಜ್ಯ ರಾಜಧಾನಿ ಬೆಂಗಳೂರಿನ ಉಲ್ಲಾಳು ಕೆರೆಯಲ್ಲಿ ಭಾಗಶಃ ನೀರು ಖಾಲಿಯಾಗಿ ಬರಿದಾಗಿದ್ದು, ವಿವಿಧ ಜಲಚರ, ಪ್ರಾಣಿ ಪಕ್ಷಿಗಳು ನೀರಿಲ್ಲದೆ, ಸಂಕಷ್ಟಕ್ಕೆ ಸಿಲುಕಿವೆ.
ಬಿಬಿಎಂಪಿ ವ್ಯಾಪ್ತಿಗೆ ಬರುವ ಉಲ್ಲಾಳು ಕೆರೆಯೂ ೨೭ ಎಕರೆ ಪ್ರದೇಶದ ವ್ಯಾಪ್ತಿಯಲ್ಲಿದ್ದು. ಕೆರೆಯ ಸುತ್ತಮುತ್ತ ಬಿಡಿಎ ಬಡಾವಣೆ ಮತ್ತು ಕೆಲವು ಖಾಸಗಿ ಬಡಾವಣೆಗಳು ತಲೆ ಎತ್ತಿದ ಪರಿಣಾಮವಾಗಿ ಕೆರೆಗೆ ಹರಿದು ಬರುತ್ತಿದ್ದ ನೀರುಗಾಲುವೆಗಳು ಕಣ್ಮರೆಯಾಗಿವೆ.ಇದರಿಂದ ಕೆರೆ ಭರ್ತಿಯಾಗುತ್ತಿಲ್ಲ.
ಈಗಾಗಲೇ ನೀರಿಲ್ಲದೆ ಸಾವಿರಾರು ಮೀನುಗಳು ಮೃತಪಟ್ಟಿವೆ. ಮತ್ತೊಂದೆಡೆ ೧೩ ರಿಂದ ೧೪ಕ್ಕೂ ಹೆಚ್ಚು ನವಿಲುಗಳು, ಆಮೆ, ಹಾವು, ಮುಂಗುಸಿ, ಅಳಿಲು ಸೇರಿದಂತೆ ಹತ್ತಾರು ಪ್ರಾಣಿ, ಪಕ್ಷಿ ಸಂಕಲುಗಳು ನೀರಿಲ್ಲದೆ ಪರದಾಡುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯರೊಬ್ಬರು, ಉಲ್ಲಾಳು ಕೆರೆಗೆ ಮಲ್ಲತಹಳ್ಳಿ ಕೆರೆಯಿಂದ ನೀರು ಸರಬರಾಜು ಮಾಡಲು ಪೈಪ್ ಅಳವಡಿಸಲಾಗಿತ್ತು. ಪೈಪ್ ಒಡೆದು ಹೋಗಿರುವುದರಿಂದ ನೀರು ಬಾರದೆ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದರು.
ನೀರು ಕಡಿಮೆಯಾಗಿ ಕೆಲವು ದಿನಗಳಿಂದ ಮೀನುಗಳು ಸಾಯುತ್ತಿದ್ದು, ಬೆಳಿಗ್ಗೆ ವಾಯು ವಿಹಾರಕ್ಕೆ ಬರುವವರು ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ನಾಲ್ಕೈದು ದಿನಗಳು ಕಳೆದರೂ ಬಿಬಿಎಂಪಿ ಕೆರೆ ಇಂಜಿನಿಯರ್ ಆಗಲಿ, ಗುತ್ತಿಗೆದಾರರಾಗಲಿ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.
ಕೆರೆಯಲ್ಲಿನ ಔಗುಪ್ರದೇಶದಲ್ಲಿ ಹೂಳೆತ್ತುವ, ನಡಿಗೆ ಮಾರ್ಗ ಸರಿಪಡಿಸುವ, ಕೆರೆ ದಂಡೆಯಲ್ಲಿ ಕಲ್ಲಿನ ಬೆಂಚು ಹಾಕುವ ಮತ್ತಿತರ ಕಾರ್ಯಗಳ ಸುಮಾರು ೨ ಕೋಟಿ ರೂ. ಕಾಮಗಾರಿಯು ಮಂಜೂರಾಗಿದೆ.
ಈ ಪೈಕಿ ಉಲ್ಲಾಳು ಕೆರೆಯ ಜೌಗು ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು, ಪಾಲಿಕೆಯಿಂದ ಹಳೆ ಬಿಲ್ ಬಾಕಿ ಕಾರಣದ ನೆಪ ಹೇಳಿ ಕಾಮಗಾರಿಯನ್ನು ನಿಲ್ಲಿಸಿದ್ದರು. ಈ ಬಗ್ಗೆಯೂ ಪಾಲಿಕೆ ಗಮನ ಸೆಳೆಯಲಾಗಿತ್ತು. ಇವೆಲ್ಲದರ ಬಗ್ಗೆ ಕ್ರಮ ಜರುಗಿಸುವುದಾಗಿ ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದೂ ಸ್ಥಳೀಯರು ಆಕ್ರೋಶ ಹೊರ ಹಾಕಿದರು.