“ವಿಶೇಷ ಲಸಿಕಾಕರಣ ಜಾಗೃತಿ ಅಭಿಯಾನ”ಕ್ಕೆ ಚಾಲನೆ

ಕಲಬುರಗಿ,ಜೂ.7:ವಿಕಲಚೇತನರಿಗೆ ಆದ್ಯತಾ ಗುಂಪು ಎಂದು ಪರಿಗಣಿಸಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ವಿಕಲಚೇತನರು ಲಸಿಕೆ ಪಡೆಯುವ ಕುರಿತು ಕಲಬುರಗಿ ನಗರದಲ್ಲಿ (ಆಟೋ ಮೂಲಕ) ಅರಿವು ಮೂಡಿಸುವ “ವಿಶೇಷ ಲಸಿಕಾಕರಣ ಜಾಗೃತಿ ಅಭಿಯಾನ”ಕ್ಕೆ ಕಲಬುರಗಿ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಕೆ. ಸುಬ್ರಮಣ್ಯ ಅವರು ಸೋಮವಾರ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ಅದ್ಯತಾ ಗುಂಪು ಎಂದು ಪರಿಗಣಿಸಿ ವಿಕಲಚೇತನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಎಲ್ಲಾ ವಿಕಲಚೇತನರು ಲಸಿಕೆ ಹಾಕಿಕೊಳ್ಳುವುದರ ಮೂಲಕ ಇದರ ಸದುಪಯೋಗ ಪಡೆಯಬೇಕೆಂದರು.

ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಜಿ.ಆರ್.ಶೆಟ್ಟರ ಮಾತನಾಡಿ, ಈ ಕೋವಿಡ್ ಮಹಾಮಾರಿ ರೋಗದಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬ ವಿಕಲಚೇತನರು ಲಸಿಕೆಯನ್ನು ಹಾಕಿಕೊಳ್ಳಬೇಕು. ಯಾವುದೇ ಮೂಢನಂಬಿಕೆಗಳಿಗೆ ಕಿವಿಗೊಡದೆ ಹಾಗೂ ಹೆದರದೆ ಎಲ್ಲಾ ವಿಕಲಚೇತನರು ಲಸಿಕೆ ಹಾಕೊಳ್ಳಬೇಕೆಂದರು.

ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಈ ವಿಶೇಷ ಲಸಿಕಾಕರಣ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ಸಾಧಿಕ್ ಹುಸೇನ್ ಖಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ, ಸಾಹಾರಾ ಸಂಸ್ಥೆಯ ಮುಖ್ಯಸ್ಥ ಮಸ್ತಾನ್ ಬಿರಾದಾರ, ಕಲಬುರಗಿ ಎಪಿಡಿ ಮುಖ್ಯಸ್ಥ ನಾಗಪ್ಪ ಅವಟಿ ಹಾಗೂ ಕಲಬುರಗಿ ಜಿಲ್ಲೆಯ ಎಂ.ಆರ್.ಡಬ್ಲ್ಯೂ. ಹಾಗೂ ವಿ.ಆರ್.ಡಬ್ಲ್ಯೂ.ಗಳು ಉಪಸ್ಥಿತರಿದ್ದರು.