ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ

ಕಲಬುರಗಿ:ಮಾ.13: ಸರ್ಕಾರಿ ಶಾಲೆಗಳಲ್ಲಿರುವ ವಿಶೇಷ ಮಕ್ಕಳ ಸಮಸ್ಯೆ ಗುರುತಿಸಿ ವಿಶೇಷ ಕಾಳಜಿ ವಹಿಸುವುದು ಬಹಳ ಅಗತ್ಯ ಎಂದು ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ತಿಳಿಸಿದರು.

ನಗರದ ಕೆಇಬಿ ಫಂಕ್ಷನ್ ಹಾಲ್‍ನಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಇಂದುಮತಿ ಚಾರಿಟೆಬಲ್ ಟ್ರಸ್ಟ್ ಸಂಚಾಲಿತ ಮನಸ್ವಿನಿ ವಿಶೇಷ ಮಕ್ಕಳ ಶಾಲೆಯ 5ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಡಿದ ಅವರು, ವಿಶೇಷ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಶಾಲೆ ನಡೆಸುತ್ತಿರುವ ಮನಸ್ವಿನಿ ಸಂಸ್ಥೆಗೆ ತಮ್ಮ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಅತಿಥಿಯಾಗಿದ್ದ ಖ್ಯಾತ ವೈದ್ಯೆ ಡಾ. ಅರುಂಧತಿ ಪಾಟೀಲ ಮಾತನಾಡಿ, ವಿಶೇಷ ಮಕ್ಕಳ ಬೆಳವಣಿಗೆಗಾಗಿ ಇಡೀ ಸಮಾಜ ಕೈ ಜೋಡಿಸಬೇಕು. ನಮ್ಮ ಸಮಾಜ ಇಂತಹ ಮಕ್ಕಳನ್ನು ಅಬ್ ನಾರ್ಮಲ್ ಎಂದು ಕರೆಯುತ್ತಾರೆ. ಆದರೆ ಮಾನವೀಯತೆ ಇಲ್ಲದ, ಕಾನೂನು ಮುರಿಯುವ, ಲೂಟಿ ಹೊಡೆಯುವ ಬಹುತೇಕರು ಇಂದು ಅಬ್ ನಾರ್ಮಲ್‍ಗಳಾಗಿದ್ದಾರೆ ಎಂದು ಉದಾಹರಣೆ ಮೂಲಕ ತಿಳಿಸಿದರು.

ಇನ್ನೊರ್ವ ಅತಿಥಿಯಾಗಿದ್ದ ಪತ್ರಕರ್ತ-ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಸರ್ವರಿಗೂ ಶಿಕ್ಷಣ ಮಕ್ಕಳ ಸಂವಿಧಾನಬದ್ಧ ಹಕ್ಕಾಗಿದ್ದು, ದೃಷ್ಟಿದೋಷ, ಶ್ರವಣದೋಷ, ಬುದ್ಧಿದೋಷ, ದೈಹಿಕದೋಷ, ಕಲಿಕಾ ದೋಷವಿರುವ ಮಕ್ಕಳನ್ನು ವಿಶೇಷ ಮಕ್ಕಳು ಎಂದು ಪರಿಗಣಿಸುತ್ತೇವೆ. ಇಂತಹ ಮಕ್ಕಳಲ್ಲಿ ಅರನೇ ಇಂದ್ರೀಯ ಅದ್ಭುತ ಕೆಲಸ ಮಡುತ್ತಿರುವುತ್ತದೆ. ಈ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಬಹಳ ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಕಾರ್ಯಕ್ರಮ ಉದ್ಘಾಟಿಸಿದರು. ಕಲಬುರಗಿ ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ಡಾ. ರೇಣುಕಾ ಹತ್ತಿ ವೇದಿಕೆಯಲ್ಲಿದ್ದರು. ಟ್ರಸ್ಟ್ ಅಧ್ಯಕ್ಷ ರಮೇಶ ಹತ್ತಿ ಅಧ್ಯಕ್ಷತೆ ವಹಿಸಿದ್ದರು. ಕಿರಣ ಪಾಟೀಲ ವಂದಿಸಿದರು. ಸಿದ್ಧಲಿಂಗಪ್ಪ ಎಸ್. ಹತ್ತಿ ಸ್ವಾಗತಿಸಿದರು. ಸರ್ವೇಶ ವಂದಿಸಿದರು. ಪ್ರಾಚಾರ್ಯೆ ಆಶಾ ನಿಪ್ಪಾಣಿ, ಸುರೇಶ ಹತ್ತಿ, ಅಪ್ಪಾರಾವ ಬಿರಾದಾರ, ಶರಣರಾಜ ಛಪ್ಪರಬಂದಿ, ಉಮೇಶ ಶೆಟ್ಟಿ ಸೇರಿದಂತೆ ಮಕ್ಕಳ ಪಾಲಕರು ಭಾಗವಹಿಸಿದ್ದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.


ಸಮಾಜದ ಮಾನಸಿಕ ಆರೋಗ್ಯವೇ ನಮ್ಮ ಸಂಸ್ಥೆಯ ಮುಖ್ಯಧ್ಯೇಯವಾಗಿದ್ದು, ಮಾನಸಿಕ ಆರೋಗ್ಯ ಮೂಡಿಸುವುದು, ವಿಶೇಷ ಮಕ್ಕಳ ಶಾಲೆ ಹಾಗೂ ಮಕ್ಕಳ ಮಾನಸಿಕ ಅಭಿವೃದ್ಧಿಗಾಗಿ ಕೇವಲ ಇಬ್ಬರು ಮಕ್ಕಳು ಹಾಗೂ ಒಬ್ಬ ಶಿಕ್ಷಕರಿಂದ ಆರಂಭವಾದ ಈ ಶಾಲೆಯಲ್ಲಿ ಇಂದು 35 ಮಕ್ಕಳು 6 ಜನ ಶಿಕ್ಷಕರಿದ್ದಾರೆ. ಈ ವಿಶೇಷ ಮಕ್ಕಳು ನಮಗೆ ಪ್ರೇರಣೆಯಾಗಿದ್ದಾರೆ.

-ಡಾ. ರೇಣುಕಾ ಹತ್ತಿ, ಟ್ರಸ್ಟಿ, ಇಂದುಮತಿ ಚಾರಿಟೇಬಲ್ ಟ್ರಸ್ಟ್, ಕಲಬುರಗಿ