ವಿಶೇಷ ಭೂಸ್ವಾಧೀನಾಧಿಕಾರಿ ಸೇರಿ ಮೂರು ಜನ ಎಸಿಬಿ‌ ಬಲೆಗೆ

ಚಿತ್ರದುರ್ಗ, ಸೆ.15: ರಸ್ತೆಯ ಅಗಲಿಕರಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ಫಲಾನುಭವಿಗಳಿಂದ ಲಂಚ ಪಡೆದ ವಿಶೇಷ ಭೂಸ್ವಾಧೀನಾಧಿಕಾರಿ ಸೇರಿ ಮೂರು ಜನರನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು  ಬಂಧಿಸಿದ್ದಾರೆ.ಹಿರಿಯೂರು ಪಟ್ಟಣದ ಶ್ರೀಮತಿ ನೇತ್ರಾ ಹೆಚ್.ಕೆ ತಂದೆ ಕರಿಯಪ್ಪ ಇವರ ರಿ.ಸ.ನಂ. 13 ಮತ್ತು ರಿ.ಸ.ನಂ. 372/1 ರಲ್ಲಿ ಜಮೀನುಗಳಲ್ಲಿನ ಜಾಗವನ್ನು ರಾಷ್ಟ್ರೀಯ ಹೆದ್ದಾರಿ-150(ಎ) ರಸ್ತೆಯ ಅಗಲೀಕರಣ ಪ್ರಕ್ರಿಯೆ ಸಲುವಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದು, ಜಮೀನಿನ ಪರಿಹಾರದ ಹಣವನ್ನು  ಶ್ರೀಮತಿ ನೇತ್ರಾ ಹೆಚ್.ಕೆ ಇವರಿಗೆ ಬಿಡುಗಡೆ ಮಾಡಬೇಕಾಗಿರುತ್ತದೆ. ಆದರೆ ಈ ಹಣವನ್ನು ಬಿಡುಗಡೆ ಮಾಡಲು ವಿಶೇಷ ಭೂಸ್ವಾಧೀನಾಧಿಕಾರಿ ವೀರೇಶ್‌ಕುಮಾರ್‌, ಮ್ಯಾನೇಜರ್ ಎಮ್.ಬಿ. ಮೋಹನ್‌ ಅವರುಗಳು‌ 6 ಲಕ್ಷ ರೂ.ಲಂಚ ಕೇಳುತ್ತಿರುವುದಾಗಿ ಶ್ರೀಮತಿ ನೇತ್ರ ಚಿತ್ರದುರ್ಗ ಎಸಿಬಿ ಪೊಲೀಸರಿಗೆ ಸೆ.14 ರಂದು ದೂರು ನೀಡಿದ್ದರು.ದೂರು ದಾಖಲಿಸಿಕೊಂಡ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಸೆ.14 ರಂದು ಸಂಜೆ 6.00 ಗಂಟೆ ಸುಮಾರಿನಲ್ಲಿ  ಜಮೀನುಗಳ ಪರಿಹಾರ ಮೊತ್ತದ ಚೆಕ್‌ಗಳಿಗೆ ಸಂಬಂಧಿಸಿದಂತೆ ವಾಹನ ಚಾಲಕ ಮನ್ಸೂರ್‌ ಅವರ ಮನೆಯಲ್ಲಿ 6 ಲಕ್ಷ ರೂ. ಲಂಚದ ಹಣವನ್ನು ಫಲಾನುಭವಿಗಳಿಂದ ಪಡೆದ ಮನ್ಸೂರ್, ನಂತರ ಮ್ಯಾನೇಜರ್‌  ಮೋಹನ್‌ ಅವರ ಮನೆಗೆ ತೆರಳಿ ನೀಡಿದ್ದಾರೆ. ನಂತರ ಮೋಹನ್‌ರವರು ತಮ್ಮ ಮೇಲಾಧಿಕಾರಿ ವೀರೇಶ್‌ಕುಮಾರ್ ಅವರೊಂದಿಗೆ ಫೋನ್‌ನಲ್ಲಿ ಲಂಚದ ಹಣ ಪಡೆದಿರುವ ಬಗ್ಗೆ ತಿಳಿಸುವಾಗ ಎಸಿಬಿ ಪೊಲೀಸರು ದಾಳಿ ನಡೆಸಿ 1ನೇ ಆಪಾದಿತ ವಿಶೇಷ ಭೂಸ್ವಾಧೀನಾಧಿಕಾರಿ ವೀರೇಶ್ ಕುಮಾರ್, 2ನೇ ಆಪಾದಿತ ಮ್ಯಾನೇಜರ್ ಮೋಹನ್ ಎಮ್.ಬಿ.  ಹಾಗೂ 3ನೇ ಆಪಾದಿತ ವಾಹನ ಚಾಲಕ ಮನ್ಸೂರ್ ಇವರನ್ನು ದಸ್ತಗಿರಿ ಮಾಡಿ 6 ಲಕ್ಷ ರೂಗಳ ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ.ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳದ  ಡಿ.ವೈ.ಎಸ್.ಪಿ ಬಸವರಾಜ ಆರ್. ಮಗದುಮ್ ವಹಿಸಿದ್ದರು.