ವಿಶೇಷ ಪ್ಯಾಕೇಜ್: ಸಿಎಂಗೆ ಅಭಿನಂದನೆ

ಕಲಬುರಗಿ,ಮೇ.20-ಕೋವಿಡ್ 2ನೇ ಅಲೆಯಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರು, ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರು, ಆಟೋ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರು ಸೇರಿ ವಿವಿಧ ವರ್ಗಗಳಿಗೆ ಬೆಂಬಲ ಪ್ಯಾಕೇಜ್ ಪ್ರಕಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಭಿನಂದಿಸಿದ್ದಾರೆ.
ಇದಲ್ಲದೆ, ಕಟ್ಟಡ ಕಾರ್ಮಿಕರು, ಕ್ಷೌರಿಕರು, ಅಗಸರು, ಟೈಲರ್ ಗಳು ಸೇರಿದಂತೆ ಅಸಂಘಟಿತ ಕಾರ್ಮಿಕ ವರ್ಗ, ರಸ್ತೆ ಬದಿಯ ವ್ಯಾಪಾರಿಗಳು, ಕಲಾವಿದರು, ಕಲಾ ತಂಡಗಳು, ಪಡಿತರ ಚೀಟಿದಾರರು ಸೇರಿದಂತೆ ಸಂಕಷ್ಟದಲ್ಲಿರುವ ಜನರಿಗೆ ಮುಖ್ಯಮಂತ್ರಿಗಳು ಭರವಸೆ ತುಂಬಿದ್ದಾರೆ ಎಂದು ತೇಲ್ಕೂರ್ ತಿಳಿಸಿದ್ದಾರೆ.
ಕೋವಿಡ್ ಚಿಕಿತ್ಸೆಗೆ ಅನುಕೂಲವಾಗಲು 2,150 ವೈದ್ಯರನ್ನು 3 ದಿನಗಳೊಳಗಾಗಿ ನೇಮಿಸುವುದಾಗಿ, ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ, ಉಚಿತ ಲಸಿಕೆ, ಗ್ರಾಮ ಪಂಚಾಯಿತಿಗಳಿಗೆ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿರುವುದಕ್ಕ ಮೆಚ್ಚುಗೆ ಸೂಚಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.