ವಿಶೇಷ ಚೇತನರಿಂದ ಮತದಾನ ಜಾಗೃತಿಯ ವಿಶೇಷ ರ್ಯಾಲಿ

ಸಂಜೆವಾಣಿ ನ್ಯೂಸ್
ಮೈಸೂರು: ಏ.05:- ಮತದಾನದ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಸಮಾಜದ ವಿವಿಧ ವರ್ಗಗಳಲ್ಲಿ ವ್ಯಾಪಕವಾಗಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ನಂಜನಗೂಡು ತಾಲ್ಲೂಕು ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ವಿಶೇಷ ಚೇತನರಿಂದ ಮತದಾನ ಜಾಗೃತಿಯ ವಿಶೇಷ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ವಿಶೇಷವಾದ ಶಕ್ತಿಯಿದೆ. ಸಂವಿಧಾನವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕನ್ನು ನೀಡಿದೆ. ಪ್ರತಿಯೊಬ್ಬ ಅರ್ಹ ಮತದಾರರು ಮತ ಚಲಾವಣೆ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ವಿಶೇಷ ಚೇತನರು, ಹಿರಿಯ ನಾಗರಿಕರಿಗಾಗಿಯೇ ಮತಗಟ್ಟೆಗಳಲ್ಲಿ ರ?ಯಾoಪ್, ವೀಲ್‍ಚೇರ್, ನೆರಳು, ನೀರಿನ ವ್ಯವಸ್ಥೆ ಸೇರಿ ಇತರೆ ಅನುಕೂಲಗಳು ಇರಲಿದ್ದು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಕರೆ ನೀಡಿದರು.
ಇದೇ ವೇಳೆ ಎಲ್ಲಾ ವಿಶೇಷಚೇತನರಿಂದ ಕಡ್ಡಾಯ ಮತದಾನದ ಸಹಿ ಸಂಗ್ರಹಣೆ ಮಾಡಲಾಯಿತು. ಬಳಿಕ ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಹುಲ್ಲಹಳ್ಳಿ ಸರ್ಕಲ್ ಮಾರ್ಗದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮತದಾನ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಶಿವಕುಮಾರ್, ತಾಲ್ಲೂಕು ಯೋಜನಾಧಿಕಾರಿ ಚಿತ್ರ ಆರ್, ವ್ಯವಸ್ಥಾಪಕಾರದ ಮಹದೇವನಾಯಕ, ತಾಲ್ಲೂಕು ಎಂ.ಆರ್.ಡಬ್ಲೂ ರಂಗಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.