ವಿಶೇಷ ಘಟಕ ಯೋಜನೆ ಪ್ರಗತಿ ಪರಿಶೀಲನಾ ಸಭೆ

ಗದಗ, ಮಾ.17: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬಿಡುಗಡೆಯಾದ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆರ್ಥಿಕ ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿಶೇಷ ಘಟಕ ಯೋಜನೆ ಮತ್ತ್ತು ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಆರ್ಥಿಕ ವರ್ಷ ಕೊನೆಗೊಳ್ಳುತ್ತಿದ್ದು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬಾಕಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ನೂರು ಪ್ರತಿಶತ ಆರ್ಥಿಕ ಪ್ರಗತಿ ಸಾಧಿಸಲು ಅಧಿಕಾರಿಗಳು ಗಮನ ಹರಿಸಬೇಕು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸದೆ ಇರುವಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈಗಾಗಲೇ ಸದರಿ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ತಾಂತ್ರಿಕ ತೊಂದರೆಗಳು ಎದುರಾದಲ್ಲಿ ಕೂಡಲೇ ಸಂಬಂಧಿಸಿದವರನ್ನು ಸಂಪರ್ಕಿಸಿ ಭೌತಿಕ ಹಾಗೂ ಆರ್ಥಿಕ ಪ್ರಗತಿ ಕುಂಠಿತವಾಗದಂತೆ ನಿಗಾ ವಹಿಸಲು ತಿಳಿಸಿದರು. ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲಗಳಾಗದಂತೆ ನಿಗಾವಹಿಸಿ ಇಲಾಖಾವಾರು ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ತಂತ್ರಾಂಶದಲ್ಲಿ ದಾಖಲಿಸಲು ತಿಳಿಸಿದರು. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳಡಿ ಕೈಗೊಳ್ಳಲಾಗುವ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ಕಾಲಮಿತಿಯೊಳಗಾಗಿಯೇ ಪ್ರಗತಿ ಸಾಧಿಸುವಂತೆ ತಿಳಿಸಿದರು.
ತದನಂತರ ಸಕಾಲ ಹಾಗೂ ಏಕೀಕೃತ ಕುಂದುಕೊರತೆಗಳ ನಿವಾರಣೆ ವ್ಯವಸ್ಥೆಗಳ ಪ್ರಗತಿ ಪರಿಶೀಲಿಸಿದ ಅವರು ಸಕಾಲದಡಿ ಸ್ವೀಕೃತವಾಗುವ ಅರ್ಜಿಗಳನ್ನು ಕಾಲಮಿತಿಯೊಳಗಾಗಿಯೇ ವಿಲೇಯಾಗಬೇಕು. ಯಾವುದೇ ಕಾರಣಕ್ಕೂ ಅರ್ಜಿ ವಿಲೇವಾರಿಯಲ್ಲಿ ವಿಳಂಭ ಧೋರಣೆ ತಾಳದಂತೆ ತಿಳಿಸಿದ ಅವರು ಅರ್ಜಿ ವಿಲೇಗೆ ಸಂಬಂಧಿಸಿದಂತೆ ಯಾವುದೇ ತಾಂತ್ರಿಕ ತೊಂದರೆಗಳು ಎದುರಾದಲ್ಲಿ ಕೂಡಲೇ ಸಂಬಂಧಿಸಿದವರ ಗಮನಕ್ಕೆ ತಂದು ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಂಡು ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.
ಫೆಬ್ರುವರಿ ಅಂತ್ಯದವರೆಗೆ 56509 ಅರ್ಜಿಗಳು ವಿಲೇವಾರಿಯಾಗಿದ್ದು ಪ್ರಸಕ್ತ ಮಾಹೆಯಲ್ಲಿ ಸಕಾಲ ಯೋಜನೆಯಡಿ ಯಾವುದೇ ಅರ್ಜಿಗಳನ್ನು ಬಾಕಿ ಉಳಿಸದೇ ಕಾಲಮಿತಿಯೊಳಗಾಗಿಯೇ ಸ್ವೀಕೃತ ಎಲ್ಲ ಅರ್ಜಿಗಳನ್ನು ವಿಲೇ ಮಾಡುವದರ ಮೂಲಕ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗುವಂತೆ ತಿಳಿಸಿದರು. ಏಕೀಕೃತಿ ಕುಂದುಕೊರತೆಗಳ ನಿವಾರಣೆ ವ್ಯವಸ್ಥೆಯಡಿ ಸ್ವೀಕೃತವಾಗುವ ಅರ್ಜಿಗಲು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ಬರುವದರಿಂದ ಇದರಲ್ಲಿ ಸ್ವೀಕೃತವಾಗುವ ಅರ್ಜಿಗಳ ಕುರಿತು ಉದಾಸೀನತೆ ತೊರದೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಅರ್ಜಿಗಳ ವಿಲೇಗೆ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ ಫೆಬ್ರುವರಿ ಅಂತ್ಯದವರೆಗೆ ಪರಿಶಿಷ್ಟ ಜಾತಿ ಉಪ ಹಂಚಿಕೆ ಯೋಜನೆಯಡಿ 7811.23 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು ಈ ಪೈಕಿ 7295.82 ಅನುದಾನ ಖರ್ಚಾಗಿದ್ದು ಶೇ.93 ಪ್ರಗತಿಯಾಗಿದೆ. ಪರಿಶಿಷ್ಟ ಪಂಗಡ ಉಪಹಂಚಿಕೆ ಯೋಜನೆಯಡಿ 2377.46 ಲಕ್ಷ ರೂ. ಬಿಡುಗಡೆಯಾಗಿದ್ದು 2088.70 ಲಕ್ಷ ರೂ. ಖರ್ಚಾಗಿದ್ದು ಶೇ. 88 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.