ವಿಶೇಷ ಆರ್ಥಿಕ ಪ್ಯಾಕೆಜ್ ಗಾಗಿ ಉಪನ್ಯಾಸಕರ ಆನ್‌ಲೈನ್ ಚಳಿವಳಿ

ದಾವಣಗೆರೆ. ಜೂ.೪; ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯಾದ್ಯಂತ ಖಾಸಗೀ ಶಾಲಾ,ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರು  ತಮ್ಮ ಮನೆಯಿಂದಲೇ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆನ್‌ಲೈನ್ ಚಳುವಳಿ ನಡೆಸಿದರು.ಈ ವೇಳೆ ಸರ್ಕಾರಕ್ಕೆ ಖಾಸಗೀ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಸಮಾಜವನ್ನು ಮುನ್ನಡೆಸುವಲ್ಲಿ ಮಹತ್ವದ ಪಾತ್ರವಹಿಸುವ ಶಿಕ್ಷಕ ಸಮುದಾಯವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದರೂ ತಮ್ಮ ಬದುಕನ್ನು ಅಲ್ಪಸ್ವಲ್ಪ ಗೌರವದಿಂದ ಸಾಗಿಸುತ್ತಿದ್ದ ಶಿಕ್ಷಕರು, ಉಪನ್ಯಾಸಕರಿಗೆ ಈಗ ಸಂಪೂರ್ಣವಾಗಿ ಅನಿಶ್ಚಿತತೆ ಆವರಿಸಿದೆ.ಕಳೆದ 14 ತಿಂಗಳುಗಳಿಂದ ಸಂಬಳವಿಲ್ಲದೇ, ಬೇರೆ ಉದ್ಯೋಗವೂ ಇಲ್ಲದೆ ಚಿಂತಾಜನಕ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ. ಕೆಲ ಶಿಕ್ಷಕರು ಶಿಕ್ಷಣೇತರ ಕ್ಷೇತ್ರಗಳಲ್ಲಿ ಸ್ವಉದ್ಯೋಗಿಯಾಗಿ ತರಕಾರಿ, ಹಣ್ಣು ಮಾರುವ ಮತ್ತು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವಂತ ದಯನೀಯ ಪರಿಸ್ಥಿತಿ ಬಂದೊದಗಿದೆ. ಇಷ್ಟಾಗಿಯೂ ಕೆಲವರಿಗೆ ಜೀವನ ಸಾಗಿಸುವುದೇ ಭಾರವಾಗುತ್ತಿದೆ. ಇನ್ನು ಕೆಲವರಂತೂ ಆರ್ಥಿಕ ಹೊರೆಯನ್ನು ತಾಳಲಾಗದೆ, ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿರುವ ಈ ಹಿನ್ನಲೆಯಲ್ಲಿ ಆರ್ಥಿಕ ಪ್ಯಾಕೇಜ್ ನೀಡಬೇಕೆಂದು ಮನವಿ ಮಾಡಿದರು.