
ನವದೆಹಲಿ,ಸೆ,೧೭- ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು ಹಲವು ಮಹತ್ವದ ಮಸೂದೆಗಳು ಮಂಡನೆಯಾಗುವ ಸಾಧ್ಯತೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಗಲಾಟೆಗೆ ವೇದಿಕೆಯಾಗುವ ಸಾಧ್ಯತೆಗಳಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿರೋದ ಪಕ್ಷಗಳ ಸಲಹೆ ತೆಗೆದುಕೊಳ್ಳದೆ ಏಕಾಏಕಿ ಸಂಸತ್ತಿನ ವಿಶೇಷ ಅಧಿವೇಶನ ನಿಗಧಿ ಮಾಡಿರುವುದು ಮತ್ತು ಕೆಲವು ಮಸೂದೆಗಳನ್ನು ಮಂಡನೆ ಮಾಡಲು ಮುಂದಾಗಿರುವ ಕ್ರಮ ಕಾವೇರಿದ ವಾತಾವರಣಕ್ಕೆ ಮುನ್ನುಡಿ ಬರೆದಿದೆ.
ನಾಳೆ ಮೊದಲ ದಿನದಂದು ಸಂಸತ್ತಿನ ೭೫ ವರ್ಷ ಸುದೀರ್ಘ ಪಯಣದ ಬಗ್ಗೆ ಚರ್ಚೆ ನಡೆಯಲಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನದಲ್ಲಿ ೭೫ ವರ್ಷದ ಸಂಸತ್ತಿನ ಇತಿಹಾಸವನ್ನು ಅವಲೋಕಿಸುವ ಚರ್ಚೆ ನಡೆಯಲಿದೆ ಎಂದು ಸರ್ಕಾರ ತನ್ನ ಕಾರ್ಯಕಲಾಪ ಪಟ್ಟಿಯಲ್ಲಿ ಈ ವಿಷಯ ತಿಳಿಸಿದೆ.
ನಾಳೆಯಿಂದ ಇದೇ ೨೨ ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನದಂದು ೭೫ ವರ್ಷಗಳ ದೇಶದ ಸಂಸದೀಯ ಪ್ರಯಾಣದ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ.
‘ಸಂವಿಧಾನ ಸಭೆ ಆರಂಭದಿಂದ ಪ್ರಾರಂಭವಾಗಿ ೭೫ ವರ್ಷಗಳ ಸಂಸತ್ತಿನ ಪ್ರಯಾ, ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು’ ಕುರಿತು ಚರ್ಚೆ ನಾಳೆಯ ಪ್ರಮುಖ ವಿಷಯವಾಗಿದೆ.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಉಭಯ ಸದನಗಳ ಸುಗಮ ಕಲಾಪಕ್ಕಾಗಿ ಅನುಕೂಲವಾಗವಂತ ಸರ್ಕಾರ ಇಂದು ಸಂಜೆ ಸರ್ವಪಕ್ಷ ಸಭೆ ಕರೆದಿದೆ. ಈ ಸಭೆಯಲ್ಲಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ವಿರೋಧ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡಿಕೊಡಲು ಕೇಂದ್ರ ಸರ್ಕಾರ ನಿರ್ದರಿಸಿದೆ.
ಸಂಸತ್ ವಿಶೇಷ ಅಧಿವೇಶನ ಹೊಸ ಸಂಸತ್ ಭವನದಲ್ಲಿ ಆರಂಭವಾಗುವ ಸಾಧ್ಯತೆಗಳಿವೆ. ವಿಶೇಷ ಅಧಿವೇಶನದ ವೇಳೆ ಹಲವು ಮಸೂದೆಗಳು ಮಂಡನೆಯಾಗಲಿದ್ದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಲಿದೆ.
ನೂತನ ಭವನದಲ್ಲಿ ಅಧಿವೇಶನ
ಸಂಸತ್ತಿನ ನೂತನ ಭವನದಲ್ಲಿ ವಿಶೇಷ ಅಧಿವೇಶನ ನಡೆಯುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ನೂತನ ಸಂಸತ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.
ಈ ವೇಳೆ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಸೇರಿದಂತೆ ರಾಜ್ಯಸಭೆ ಮತ್ತು ಲೋಕಸಭೆಯ ಹಿರಿಯ ಅಧಿಕಾರಿಗಳು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.