ವಿಶೇಷ ಅಧಿವೇಶನಕ್ಕೆ ಸೋನಿಯಾ ಬೇಸರ

ನವದೆಹಲಿ,ಸೆ.೬- ವಿರೋಧ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ಮಾಡದೆ ಈ ತಿಂಗಳ ೧೮ ರಿಂದ ೨೨ರ ತನಕ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದೀರಿ, ಇದರ ಕಾರ್ಯಸೂಚಿಯನ್ನೂ ತಿಳಿಸಿಲ್ಲ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂದಿ ಅವರು ಅತೃಪ್ತಿ ಅಸಮಾಧಾನ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.ಐದು ದಿನಗಳ ಕಾರ್ಯಕಲಾಪದಲ್ಲಿ ಏನು ನಡೆಯುತ್ತದೆ ಎನ್ನುವುದು ರಾಜಕೀಯ ಪಕ್ಷಗಳಿಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟು ೯ ವಿಷಯಗಳನ್ನು ಪ್ರಸ್ತಾಪ ಮಾಡಿರುವ ಸೋನಿಯಾ ಗಾಂಧಿ ಅವರು ವಿಶೇಷ ಅಧಿವೇಶನದಲ್ಲಿ ಭಾಗವಹಿಸಲು ಇಂಡಿಯಾ ಮೈತ್ರಿಕೂಟದ ೨೪ ಪಕ್ಷಗಳೂ ಸಿದ್ದವಿವೆ. ನಮಗೆ ನಾವು ಪ್ರಸ್ತಾಪ ಮಾಡಿರುವ ವಿಷಯದ ಚರ್ಚೆಗೆ ಅವಕಾಶ ಕೊಡಿ ಎಂದಿದ್ದಾರೆ.ಸಾರ್ವಜನಿಕ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳನ್ನು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲು ಸೂಕ್ತ ಅವಕಾಶ ಮತ್ತು ಚರ್ಚೆಗೆ ಸಮಯ ನಿಗದಿ ಪಡಿಸಿ ಎಂದಿದ್ದಾರೆ.ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಅಸಮಾನತೆಗಳ ಏರಿಕೆ ಮತ್ತು ಎಂ ಎಸ್ ಎಂಇ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.ಕನಿಷ್ಟ ಬೆಂಬಲ ಬೆಲೆ ಮತ್ತು ರೈತರ ಇತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ರೈತರು ಮತ್ತು ರೈತ ಸಂಘಟನೆಗಳಿಗೆ ನೀಡಿದ ಭರವಸೆ ಉಳಿಸಿಕೊಳ್ಳಬೇಕು ಎಂದಿದ್ದಾರೆ.ಅದಾನಿ ವ್ಯಾಪಾರ ಸಮೂಹದ ವಹಿವಾಟುಗಳನ್ನು ತನಿಖೆ ಮಾಡಲು ಜೆಪಿಸಿ ತನಿಖೆ ನಡೆಸಬೇಕು ಎಂದು ಪುನರುಚ್ಚರಿಸಿದ್ದಾರೆ.ಮಣಿಪುರದ ಜನರು ಎದುರಿಸುತ್ತಿರುವ ನಿರಂತರ ಸಂಕಟ ಮತ್ತು ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರಗಳು ಮತ್ತು ಸಾಮಾಜಿಕ ಸಾಮರಸ್ಯದ ಕುಸಿತ.ಹರಿಯಾಣದಂತಹ ವಿವಿಧ ರಾಜ್ಯಗಳಲ್ಲಿ ಕೋಮು ಉದ್ವಿಗ್ನತೆ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.ಚೀನಾದಿಂದ ಭಾರತೀಯ ಭೂಪ್ರದೇಶದ ಮುಂದುವರಿದ ಆಕ್ರಮಣ ಮತ್ತು ಲಡಾಖ್ ಮತ್ತು ಅರುಣಾಚಲ ಪ್ರದೇಶದ ನಮ್ಮ ಗಡಿಗಳಲ್ಲಿ ನಮ್ಮ ಸಾರ್ವಭೌಮತ್ವಕ್ಕೆ ಸವಾಲುಗಳು,. ಜಾತಿ ಗಣತಿಯ ತುರ್ತು ಅಗತ್ಯ.ಕೇಂದ್ರ-ರಾಜ್ಯ ಸಂಬಂಧಗಳ ಮೇಲೆ ಆಗುತ್ತಿರುವ ಹಾನಿ. ಹಾಗು ಕೆಲವು ರಾಜ್ಯಗಳಲ್ಲಿ ವಿಪರೀತ ಪ್ರವಾಹದಿಂದ ಉಂಟಾದ ನೈಸರ್ಗಿಕ ವಿಕೋಪಗಳ ಪರಿಣಾಮ ದ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡುವಂತೆ ಒಟ್ಟು ೯ ಅಂಶಗಳನ್ನು ಸೋನಿಯಾಗಾಂಧಿ ಪ್ರಸ್ತಾಪ ಮಾಡಿ ಪತ್ರದಲ್ಲಿ ತಿಳಿಸಿದ್ದಾರೆ.