ವಿಶೇಷ ಅಧಿವೇಶನಕ್ಕೆ “ಇಂಡಿಯಾ”

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೬:ಸೆ. ೧೮ ರಿಂದ ೨೨ರವರೆಗೂ ನಡೆಯಲಿರುವ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂಬುದಾಗಿ ಬದಲಿಸಲು ಕೇಂದ್ರ ಸರ್ಕಾರ ತಿದ್ದುಪಡಿ ವಿಧೇಯಕವನ್ನು ಮಂಡಿಸಲಿದೆ ಎಂಬ ಚರ್ಚೆಗಳ ಬೆನ್ನಲ್ಲೆ ಈ ವಿಶೇಷ ಅಧಿವೇಶನದಲ್ಲಿ ಭಾಗಿಯಾಗಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ನಿರ್ಧರಿಸಿರುವುದರಿಂದ ಇಂಡಿಯಾ ಬದಲು ಭಾರತ ನಾಮಕರಣ ವಿಚಾರ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಚರ್ಚೆ ವಾಗ್ವಾದಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.
ಕೇಂದ್ರ ಸರ್ಕಾರ ಇಂಡಿಯಾ ಬದಲು ಭಾರತ ಎಂದು ಹೆಸರನ್ನು ಬದಲಿಸಲು ಮುಂದಾಗಿ ಜಿ-೨೦ ಶೃಂಗ ಸಭೆಯ ಭೋಜನ ಕೂಟದ ಆಮಂತ್ರಣ ಪತ್ರಿಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭಾರತದ ರಾಷ್ಟ್ರಪತಿ ಎಂದು ಸಂಭೋದಿಸಿರುವುದು ಬಿಜೆಪಿ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ನಡುವೆ ಭಾರಿ ವಾಗ್ವಾದಗಳಿಗೆ ಕಾರಣವಾಗಿದೆ. ರಾಜಕೀಯವಾಗಿಯೂ ದೇಶಾದ್ಯಂತ ಚರ್ಚೆಗೂ ಈ ವಿಚಾರ ಕಾರಣವಾಗಿದೆ.ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕೇಂದ್ರ ಸರ್ಕಾರ ಸೆ. ೧೮ ರಿಂದ ೨೨ರವರೆಗೆ ನಡೆಯುವ ಸಂಸತ್ ಅಧಿವೇಶನದಲ್ಲಿ ಇಂಡಿಯಾ ಬದಲು ಭಾರತ ಎಂದು ನಾಮಕರಣ ಮಾಡಲು ತಯಾರಿ ನಡೆಸಿರುವ ಸುಳಿವು ಗೊತ್ತಾಗುತ್ತಿದ್ದಂತೆಯೇ ಇಂಡಿಯಾ ಮೈತ್ರಿ ಕೂಟದ ಎಲ್ಲ ಪಕ್ಷಗಳು ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವ ತೀರ್ಮಾನ ಕೈಗೊಂಡಿದೆ. ಈಗಾಗಲೇ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಹೆಸರು ಬದಲಾವಣೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ. ಹಾಗಾಗಿ, ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಮಾತಿನ ಜಟಾಪಟಿ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಎರಡೂ ಸದನಗಳ ಇಂಡಿಯಾ ಮೈತ್ರಿಕೂಟದ ನಾಯಕರುಗಳ ಸಭೆಯಲ್ಲಿ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಸಂಬಂಧ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಮುಖೇನ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಮೈತ್ರಿಕೂಟದ ಎಲ್ಲ ೨೪ ಪಕ್ಷಗಳು ಪಾಲ್ಗೊಳ್ಳಲಿವೆ ಎಂಬ ಮಾಹಿತಿಯನ್ನು ನೀಡುವರು ಎಂದು ಎನ್‌ಡಿಎ ಮೈತ್ರಿಕೂಟದ ಮೂಲಗಳು ಹೇಳಿವೆ.
ಕಳೆದವಾರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ಜೋಷಿ ಅವರು ಸೆ. ೧೮ ರಿಂದ ೨೨ರವರೆಗೂ ೫ ದಿನ ಸಂಸತ್ತಿನ ವಿಶೇಷ ಅಧಿವೇಶನ ನಡೆಯುವ ಬಗ್ಗೆ ಮಾಹಿತಿ ನೀಡಿದ್ದರಾದರೂ ಅಧಿವೇಶನದ ಕಾರ್ಯಸೂಚಿ, ಅಧಿವೇಶನದಲ್ಲಿ ಚರ್ಚೆಯಾಗುವ ವಿಚಾರಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಈ ಅಧಿವೇಶನದಲ್ಲೆ ಇಂಡಿಯಾ ಬದಲು ಭಾರತ ಎಂಬ ಹೆಸರಿಡುವ ತಿದ್ದುಪಡಿ ವಿಧೇಯಕವನ್ನು ಮಂಡಿಸುವ ಸಾಧ್ಯತೆಯನ್ನು ಅರಿತಿರುವ ಇಂಡಿಯಾ ಮೈತ್ರಿಕೂಟ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಹೆಸರು ಬದಲಿಸುವ ಪ್ರಸ್ತಾಪದ ಬಗ್ಗೆ ಸಂಸತ್‌ನಲ್ಲಿ ಆಡಳಿತ ಪಕ್ಷಗಳೊಂದಿಗೆ ಜಟಾಪಟಿ ನಡೆಸುವ ಸಾಧ್ಯತೆಗಳು ನಿಚ್ಚಳ. ಯಾವುದೇ ಕಾರಣಕ್ಕೂ ಸಂಸತ್ ಅಧಿವೇಶನದಿಂದ ದೂರ ಉಳಿದು ಬಿಜೆಪಿಗೆ ಅನುಕೂಲ ಮಾಡಿಕೊಡುವುದು ಬೇಡ, ಅಧಿವೇಶನದಲ್ಲಿ ಪಾಲ್ಗೊಂಡು ಬಿಜೆಪಿಯ ನಿಲುವುಗಳಿಗೆ ವಿರೋಧಿಸುವ ತೀರ್ಮಾನಕ್ಕೆ ಇಂಡಿಯಾ ಮೈತ್ರಿಕೂಟ ಬಂದಿದೆ.ಮುಂಗಾರು ಅಧಿವೇಶನದ ನಂತರ ವಿಶೇಷ ಅಧಿವೇಶನದ ಘೋಷಣೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದು, ಈ ಅಧಿವೇಶನದಲ್ಲಿ ಇಂಡಿಯಾ ಬದಲು ಭಾರತ ಎಂಬ ಹೆಸರಿಡುವ ಪ್ರಸ್ತಾಪ ಒಂದು ದೇಶ ಒಂದು ಚುನಾವಣೆ ಸಂಬಂಧ ನಿರ್ಣಯಗಳನ್ನು ಅಂಗೀಕರಿಸುವ ಸಾಧ್ಯತೆಗಳಿದ್ದು, ವಿಶೇಷ ಅಧಿವೇಶನದ ಕಾರ್ಯಸೂಚಿ ಕುತೂಹಲಕ್ಕೆಡೆ ಮಾಡಿದೆ.

ಮೋದಿ ಭಾರತ ಪ್ರಧಾನಿ
ಇಂದು ಇಂಡೋನೇಷಿಯಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರಮೋದಿ ಅವರನ್ನು ಭಾರತದ ಪ್ರಧಾನಿ ಎಂದೇ ಉಲ್ಲೇಖಿಸಲಾಗಿದೆ. ಪ್ರಧಾನಿ ನರೇಂದ್ರಮೋದಿ ಅವರು ಇಂಡೋನೇಷಿಯಾಗೆ ಭೇಟಿ ನೀಡುತ್ತಿರುವ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್‌ಪಾತ್ರ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡು ಭಾರತದ ಪ್ರಧಾನಿ ನರೇಂದ್ರಮೋದಿ ಅವರು ಇಂಡೋನೇಷಿಯಾ ಅಧ್ಯಕ್ಷ ಜೋಕೊ ವಿಡೋಡೊ ಅವರ ಆಹ್ವಾನದ ಮೇರೆಗೆ ೨೦ನೇ ಏಷ್ಯನ್ ಭಾರತ ಶೃಂಗಸಭೆ ಮತ್ತು ೧೮ನೇ ಪೂರ್ವ ಏಷ್ಯ ಶೃಂಗಸಭೆಗಾಗಿ ಜಕಾರ್ತಾಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದು, ಇಂಡೋನೇಷಿಯಾದ ಅಧಿಕೃತ ಆಹ್ವಾನ ಪತ್ರದಲ್ಲಿ ಮೋದಿ ಅವರನ್ನು ಭಾರತದ ಪ್ರಧಾನಿ ಎಂದೇ ಉಲ್ಲೇಖಿಸಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದಲ್ಲದೆ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮೋದಿ ಅವರನ್ನು ಭಾರತದ ಪ್ರಧಾನಮಂತ್ರಿ ಎಂದೇ ಉಲ್ಲೇಖಿಸಲಾಗಿತ್ತು.