ವಿಶೇಷಚೇತನರ ಮನೆಯ ಬಾಗಿಲಿಗೆ ಯುಡಿಐಡಿ ಕಾರ್ಡ್

ಕಲಬುರಗಿ: ಆ.4:ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣೆ ಸಮಾನ ಅವಕಾಶ ಮತ್ತು ಪೂರ್ಣ ಭಾಗವಹಿಸುವಿಕೆಗಾಗಿ ಭಾರತ ಸರ್ಕಾರವು ವಿಕಲಚೇತನ ವ್ಯಕ್ತಿಗಳ ಅಧಿನಿಯಮ 2016ನ್ನು ಜಾರಿಗೆ ತಂದಿರುತ್ತದೆ. ಅದರಲ್ಲಿ 21 ವಿವಿಧ ರೀತಿಯ ವಿಕಲಚೇತನರನ್ನು ಗುರುತಿಸಿದೆ. ಹೊಸ ಮಾದರಿಯ ವಿಶೇಷಚೇತನರ ವಿಶಿಷ್ಟ ಗುರುತಿನ ಚೀಟಿಯನ್ನು ಆಯಾ ತಾಲುಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿರುವ ವೈದ್ಯಕೀಯ ಮಂಡಳಿಯಿಂದ ಪಡೆಯಲು ಅವಕಾಶವನ್ನು ಕಲ್ಪಿಸಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ ಇನ್ನೂ 25 ಪ್ರತಿಶತ ವಿಶೇಷಚೇತನರು ವಿಶಿಷ್ಟ ಗುರುತಿನ ಚೀಟಿಯನ್ನು ಪಡೆದಿರುವುದಿಲ್ಲ. ಎಲ್ಲಾ ವಿಶೇಷಚೇತನರಿಗೆ ವಿಶಿಷ್ಟ ಗುರುತಿನ ಚೀಟಿಯನ್ನು (ಯು.ಡಿ.ಐ.ಡಿ) ನೀಡುವ ಉದ್ದೇಶದಿಂದ “ವಿಶೇಷಚೇತನರ ಮನೆಯ ಬಾಗಿಲಿಗೆ ಯುಡಿಐಡಿ ಕಾರ್ಡ್” ಎಂಬ ಘೋಷದಡಿಯಲ್ಲಿ ಸರ್ಕಾರ ಅಗಸ್ಟ್ ತಿಂಗಳನ್ನು ಸಂಪೂರ್ಣ ಮಾಸಾಚರಣೆಯಾಗಿ ಆಚರಿಸುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವಿಶಿಷ್ಟ ಗುರುತಿನ ಚೀಟಿ ಕಡ್ಡಾಯವಾಗಿರುವುದರಿಂದ ಎಲ್ಲಾ ವಿಶೇಷಚೇತನರು ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ) ಪಡೆದುಕೊಳ್ಳುವುದರ ಮೂಲಕ ಸರ್ಕಾರ ನೀಡಿರುವ ವಿಶೇಷ ಅವಕಾಶದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಿಸೇಬಲ್ಡ ಹೆಲ್ಪಲೈನ್ ಫೌಂಡೆಶನ್ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.