
ಕೋಲಾರ, ಮೇ ೨- ೮೦ ವರ್ಷ ಮೇಲ್ಪಟ್ಟ ಹಾಗೂ ಮತಗಟ್ಟೆಗೆ ಬರಲಾಗದ ವಿಶೇಷಚೇತನರಿಗೆ ಮನೆಮನೆಗೆ ಮತಗಟ್ಟೆಯನ್ನು ಕೊಂಡೊಯ್ದು ಮತ ಚಲಾಯಿಸಲು ಅವಕಾಶ ಮಾಡಿಕೊಡುವ ವಿಶೇಷ ಸೌಲಭ್ಯವನ್ನು ಭಾರತ ಚುನಾವಣಾ ಆಯೋಗವು ಪ್ರಸ್ತುತ ಚುನಾವಣೆಯಿಂದ ಪರಿಚಯಿಸಿದೆ.
ಈಗಾಗಲೇ ೧೨ಡಿ ಅಡಿ ಅರ್ಜಿ ನೀಡಿರುವ ೮೦ ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿಗೆ ಮೇ ೦೨ ಹಾಗೂ ೩ ರಂದು ಮನೆ ಮನೆಗೆ ತೆರಳಿ ಮತಪತ್ರ ನೀಡಿ ಮತದಾನ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ೧೨ ಡಿ ಅಡಿ ಅರ್ಜಿ ಸಲ್ಲಿರುವವರ ಮನೆ ಮನೆಗೆ ತೆರಳಿ ಮತದಾನ ಅಧಿಕಾರಿಗಳು ಮತಪತ್ರ ಮೂಲಕ ಮತದಾನ ಮಾಡಿಸುವರು. ಈ ಸಂದರ್ಭದಲ್ಲಿ ಮತ ಯಾರಿಗೆ ಚಲಾಯಿಸುತ್ತಾರೆ ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗುವುದು. ಮತದಾನ ಮಾಡಿಸಲು ಚುನಾವಣಾಧಿಕಾರಿಗಳು ರೂಟ್ ಮ್ಯಾಪ್ ಹಾಗೂ ನಿಗಿದಿತ ಸಮಯ ಹಾಗೂ ದಿನಾಂಕವನ್ನು ನೀಡುವರು. ಅ ಸಮಯದಲ್ಲಿ ನಿರ್ದಿಷ ವಿಳಾಸಗಳಿಗೆ ತೆರಳಿ ಮತದಾನವನ್ನು ಮತಪತ್ರಗಳಲ್ಲಿ ಪಡೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೆಕ್ಟರ್ ಅಧಿಕಾರಿಗಳು ಮತದಾನ ಪ್ರಕ್ರಿಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ರೂಟ್ ಮ್ಯಾಪ್ ಪ್ರಕಾರ ಮಾಹಿತಿಯನ್ನು ನೀಡುತ್ತಾರೆ. ತಂಡದಲ್ಲಿ ೨ ಪೋಲಿಂಗ್ ಅಧಿಕಾರಿಗಳು, ೧ಪೊಲೀಸ್ ಸಿಬ್ಬಂದಿ, ೧ವಿಡಿಯೋಗ್ರಾಫರ್ ಹಾಗೂ ಸಂಬಂಧಿತ ಬೂತ್ ಲೆವೆಲ್ ಆಫೀಸರ್ ಸಿಬ್ಬಂದಿ ಇರುತ್ತಾರೆ.
ಪೋಸ್ಟಲ್ ಬ್ಯಾಲೆಟ್ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಏಜೆಂಟ್‌ಗಳನ್ನು ನೇಮಿಸಿಕೊಳ್ಳಲು ಅವಕಾಶವಿರುತ್ತದೆ. ಈ ಸಂಬಂಧ ತಮ್ಮ ಏಜೆಂmಗಳ ವಿವರವನ್ನು ಆಯಾ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಮೊದಲೇ ನೀಡಿರಬೇಕು. ಚುನಾವಣಾಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಏಜೆಂಟರು ಮಾತ್ರ ಬ್ಯಾಲೆಟ್ ಮತದಾನ ಪಡೆಯುವ ಸಂದರ್ಭದಲ್ಲಿ ಉಪಸ್ಥಿತರಿರಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯ ೦೬ ವಿಧಾನಸಭಾ ಮತಕ್ಷೇತ್ರಗಳಲ್ಲಿ ೮೦ ವರ್ಷ ಮೇಲ್ಪಟ್ಟ ೮೨೭ ಮತದಾರರು ಮತ್ತು ೧೯೧ ವಿಶೇಷಚೇತನ ಮತದಾರರು ಸೇರಿ ಒಟ್ಟು ೧೦೧೮ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸದರಿ ಮತಗಟ್ಟೆಯು ಬೆಳಿಗ್ಗೆ ೯.೦೦ರಿಂದ ಸಂಜೆ ೫.೦೦ರ ವರೆಗೆ ಸತತವಾಗಿ ಮೂರು ದಿನಗಳ ಕಾಲ ತೆರೆದಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.