ವಿಶೇಷಚೇತನರನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಕೈಜೋಡಿಸೋಣ

ಸಂಜೆವಾಣಿ ನ್ಯೂಸ್
ಮೈಸೂರು, ಫೆ.24:- ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲರ ಕೈಜೋಡಿಸಬೇಕು ಎಂದು ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷರೂ ಆದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಮನವಿ ಮಾಡಿದರು.
ಜನಪರ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀರಾಂಪುರ ಅನ್ನಪೂರ್ಣ ಬಡಾವಣೆಯ ಶ್ರೀ ನವಚೇತನ ಬಸವೇಶ್ವರ ಟ್ರಸ್ಟಿನ ವಿಶೇಷ ಚೇತನರ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಗ್ಗು ಜಾದೂ ಪ್ರದರ್ಶನ ಹಾಗೂ ಜನಪರ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿಶೇಷಚೇತನರಿಗೆ ಅನುಕಂಪ, ಕನಿಕರ ಬೇಕಾಗಿಲ್ಲ. ಬದಲಿಗೆ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಮೂಲಕ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ. ಯಾರೊಬ್ಬರೂ ಕೂಡ ವಿಶೇಷಚೇತನರನ್ನು ನಿಕೃಷ್ಟವಾಗಿ ಕಾಣಬಾರದು. ಹಾಸ್ಯ ಮಾಡಬಾರದು. ಅಂಗವಿಕಲತೆ ಶಾಪವಲ್ಲ, ವರ. ಅವರಲ್ಲಿ ಕೂಡ ಸಾಕಷ್ಟು ಪ್ರತಿಭಾವಂತರಿದ್ದು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು ಇದ್ದಾರೆ. ಹೀಗಾಗಿ ಇಲ್ಲಿರುವ ಮಕ್ಕಳ ವಿಶೇಷ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಎಚ್.ಡಿ. ಕೋಟೆ ತಾ. ಸಾವಿತ್ರಿ ಬಾಪುಲೆ ಶಿಕ್ಷಕಿಯರ ಸಂಘದ ಕಾರ್ಯದರ್ಶಿ ಎಲ್.ಕೆ. ರೂಪಾ ಪ್ರಮೋದ್ ಮಾತನಾಡಿ ವಿಶೇಷಚೇತನರಲ್ಲಿ ತಾಯ್ತನದ ಮನಸ್ಸು, ಮಗುವಿನ ಮುಗ್ಧತೆ ಇರುತ್ತದೆ ಎಂದರು. ಮಾಜಿ ಸೈನಿಕ ಬೀರೇಶ್ ಮಾತನಾಡಿ, ನಾವು ಪ್ರಯತ್ನ ಮಾಡುವ ಮೊದಲೇ ಸೋಲುತ್ತಿದ್ದೇವೆ. ಇದರ ಬದಲು ಧೈರ್ಯದಿಂದ ಮುಂದೆ ಸಾಗಿದರೆ ಗೆಲವು ಖಚಿತ ಎಂದರು.
ಪಾಲಿಕೆ ಮಾಜಿ ಸದಸ್ಯರಾದ ನಿರ್ಮಲಾ ಹರೀಶ್ ಮಾತನಾಡಿ, ವಿಶೇಷಚೇತನರಿಗೆ ವಿಶೇಷ ಪ್ರತಿಭೆ ಇರುತ್ತದೆ. ಅಂಧತ್ವ ಇದ್ದರೂ ಕೂಡ ಒಮ್ಮೆಪರಿಚಿತರಾದರೇ ಸಾಕು, ಕೇವಲ ಧ್ವನಿಯಿಂದಲೇ ಗುರುತಿಸುತ್ತಾರೆ. ಇಂತಹ ವಿಶೇಷ ಪ್ರತಿಭಾವಂತರಿಗೆ ಸಮಾಜ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯ ಡಾ.ಮಾಲೇಗೌಡ ಮಾತನಾಡಿ, ಕೇವಲ ತೋರಿಕೆಗಾಗಿ ಸೇವೆ ಮಾಡಬಾರದು. ನಿಜವಾದ ಕಾಳಜಿ ಇದ್ದಲ್ಲಿ ಈ ರೀತಿಯ ವಿಶೇಷಚೇತನರ ಸೇವೆ ಮಾಡಬೇಕು ಎಂದು ಸಲಹೆ ಮಾಡಿದರು.
ಮಕ್ಕಳು ಅಂಗವಿಕಲರಾಗಿ ಹುಟ್ಟಿದಾಗ ಆರ್ಥಿಕವಾಗಿ ಸದೃಢವಾಗಿಲ್ಲದ ಪೆÇೀಷಕರು ಚಿಂತೆಗೀಡಾಗುತ್ತಾರೆ. ಅಂಥವರ ನೆರವಿಗೆ ಸಮಾಜ ನಿಲ್ಲಬೇಕು ಎಂದು ಅವರು ಹೇಳಿದರು. ಜನಪರ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿ, ಸತ್ತವರಿಗೆ ಸಾಂತ್ವನ ಹೇಳುವ ಬದಲು ಬದುಕಿರುವ ಇಂತಹ ವಿಶೇಷಚೇತನರಿಗೆ ಸಹಾಯಹಸ್ತ ಚಾಚಬೇಕು ಎಂದರು.
ತಮ್ಮದಲ್ಲದ ತಪ್ಪಿಗೆ ಈ ಮಕ್ಕಳು ವಿಶೇಷಚೇತನರಾಗಿದ್ದಾರೆ ಎಂಬುದನ್ನು ನಾವೆಲ್ಲಾ ಅರಿತು ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದ ಅವರು, ಇದೇ ರೀತಿ ತಮ್ಮದಲ್ಲದ ತಪ್ಪಿಗೆ, ಯಾವುದೋ ಉದ್ವೇಗದಲ್ಲಿ ತಪ್ಪು ಮಾಡಿ, ಜೈಲು ಸೇರಿರುವ ಕೈದಿಗಳಿಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಉದ್ದೇಶ ಇದೆ ಎಂದರು.
ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ ಆಶಯ ಭಾಷಣ ಮಾಡಿ, ಸಮಾಜದ ಎಲ್ಲಾ ವರ್ಗದ ಜನರನ್ನು ಜೋಡಿಸುವ ಕಾಯಕದಲ್ಲಿ ಪರಿಷತ್ತು ನಿರತವಾಗಿದೆ. ರಾಜ್ಯಾದ್ಯಂತ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿಶೇಷಚೇತನರನ್ನು ಗುರುತಿಸಿ, ಸಾಂಸ್ಕೃತಿಕವಾಗಿ ಅವರನ್ನು ಮುಂದೆ ತರುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಧಾಟಿಸಿದರು. ಶ್ರೀ ನವಚೇತನ ಬಸವೇಶ್ವರ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮರೀಗೌಡ ಮುಖ್ಯ ಅತಿಥಿಯಾಗಿದ್ದರು. ಕಾವ್ಯಶ್ರೀ, ಡಾ.ಮಾದಪ್ಪ, ಡಾ.ಬಿ. ಬಸವರಾಜು, ಪ್ರೇಮಾ, ಮಹದೇವ, ಮಲ್ಲೇಶ್, ವೆಂಕಟೇಶ್, ಮಂಜು, ನಂಜುಂಡಸ್ವಾಮಿ, ರಾಜೇಶ್, ಶಿವರಾಮೇಗೌಡ, ಬಸವರಾಜು, ಶಾಂತಾ ರಾಮಕೃಷ್ಣ, ಬೀರೇಶ್, ಮುಖ್ಯ ಶಿಕ್ಷಕ ಸುಂದರನಾಯಕ, ಶಿಕ್ಷಕಿಯರು, ಪೆÇೀಷಕರು, ವಿದ್ಯಾರ್ಥಿಗಳು ಇದ್ದರು.
ಸನ್ಮಾನ ಸ್ವೀಕರಿಸಿದ ಜನಪರ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ಅವರು ಶಾಲಾ ಮಕ್ಕಳ ಉಪಯೋಗಕ್ಕೆ ಬೇಕಾದ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು. ನಗರಪಾಲಿಕೆ ಮಾಜಿ ಸದಸ್ಯರಾದ ನಿರ್ಮಲಾ ಹರೀಶ್ ಅವರು ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಜಾದೂಗಾರ್ ಜಗ್ಗು ಅವರು ಒಂದೂವರೆ ತಾಸು ಜಾದೂ ಪ್ರದರ್ಶಿಸಿ, ವಿಶೇಷಚೇತನ ಮಕ್ಕಳನ್ನು ರಂಜಿಸಿದರು.