ವಿಶಿಷ್ಟ ಮತದಾನ ಜಾಗೃತಿ

ಗಜೇಂದ್ರಗಡ,ಏ8: ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಜಲಸಂಜೀವಿನಿ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಸಾವಿರಾರು ಕೂಲಿಕಾರರ ಜೊತೆಗೆ ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಲಾಯಿತು.
ಉದ್ಯೋಗ ಖಾತ್ರಿಯ ಕೆಲಸದ ಸ್ಥಳದಲ್ಲಿ ರಂಗೋಲಿ ಮೂಲಕ ಚುನಾವಣೆ ಚಿಹ್ನೆ, ಮಹಿಳಾ ಕೂಲಿಕಾರರಿಂದ ಮತದಾನ ಮಾಡುವ ದಿನಾಂಕ ಮೇ 10 ಬಿಡಿಸಿ ಜಾಗೃತಿ ಮೂಡಿಸಲಾಯಿತು.
ತಾಲೂಕು ಪಂಚಾಯತ ನರೇಗಾ ಸಹಾಯಕ ನಿರ್ಧೇಶಕರಾದ ವಾಸುದೇವ ಪೂಜಾರ ಮಾತನಾಡಿ, ಮೇ 10 ರಂದು ನಡೆಯುವ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು ಎಲ್ಲರೂ ತಮ್ಮ ಮತದಾನ ಮಾಡುವ ಮೂಲಕ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದರು.
ಮತದಾರನ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಬೇಕು. ಚುನಾವಣೆಯಲ್ಲಿ ಯಾರೊಬ್ಬರು ಆಸೆ, ಆಮಿಸೆಗೆ ಒಳಗಾಗದೆ ಸೂಕ್ತ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಒಳ್ಳೆಯ ಅಭ್ಯರ್ಥಿಯನ್ನು ಆರಿಸಿ ತರಬೇಕು ಎಂದು ತಿಳಿಸಿದರು.
ಇದೇ ವೇಳೆ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪಿಡಿಒ ಅಮರೇಶ ಮಾತನಾಡಿದರು.
ಈ ಸಂದರ್ಭದಲ್ಲಿ ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ, ತಾಂತ್ರಿಕ ಸಂಯೋಜಕರಾದ ಪ್ರಿಯಾಂಕ ಅಂಗಡಿ, ತಾಂತ್ರಿಕ ಸಾಹಾಯಕರಾದ ನವೀನ್ ಬಸರಿ, ಟಿಎಎ ಸಿದ್ದು ಗುಡಿಮನಿ, ಬಿಎಫ್.ಟಿ ಚಂದ್ರಕಾಂತ ಲಮಾಣಿ, ಗ್ರಾಮ ಕಾಯಕ ಮಿತ್ರರಾದ ಗಂಗವ್ವ ಗಡಾದ, ಗ್ರಾ.ಪಂ. ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.