ವಿಶಿಷ್ಟ ಕಲೆಗಳನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ

ರಾಯಚೂರು,ಮಾ.೦೪- ತಳ ಸಮುದಾಯದ ವಿಶಿಷ್ಟ ಕಲೆಗಳು ನಮ್ಮ ದೇಶ ಹಾಗೂ ರಾಜ್ಯದ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತವೆ. ಪ್ರಸ್ತುತ ದಿನಮಾನಗಳಲ್ಲಿ ಈ ಕಲೆಗಳು ನಶಿಸಿ ಹೊಗುತ್ತಿದ್ದು, ಕಲೆಗಳಿಗೆ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದು ರಿಮ್ಸ್ ಆಡಳಿತಾಧಿಕಾರಿ ಡಾ.ಹಂಪಣ್ಣ ಸಜ್ಜನ್ ಅವರು ಹೇಳಿದರು.
ಅವರು ಮಾ.೦೪ರ(ಶನಿವಾರ) ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಮೂಲ ಸಂಸ್ಕೃತಿ – ಕನ್ನಡ ಸಂಸ್ಕೃತಿ ತರಬೇತಿ ನಶಿಸಿ ಹೋಗುತ್ತಿರುವ ತಳಸಮುದಾಯದ ವಿಶಿಷ್ಠ ಕಲೆಗಳ ತರಬೇತಿ ಹೊಂದಿದ ಶಿಬಿರಾರ್ಥಿಗಳಿಂದ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಜನಪದ, ಹಗಲುವೇಷ, ಗೀಗೀಪದ, ಸೋಬಾನಪದ ಸೇರಿದಂತೆ ಇನ್ನೂ ಹಲವು ಕಲಾ ಪ್ರಕಾರಗಳನ್ನು ಕಾಣುತ್ತಿದ್ದೆವು ಆದರೆ ಈಗೀನ ದಿನಮಾನದಲ್ಲಿ ಈ ಎಲ್ಲಾ ಕಲೆಗಳು ನಶಿಸಿ ಹೋಗುತ್ತಾ ತಳಸಮುದಾಯದ ವಿಶಿಷ್ಠ ಕಲೆಗಳು ಕಣ್ಮರೆಯಾಗುತ್ತಿವೆ ಎಂದರು.
ನಮ್ಮ ದೇಶ ವೈವಿದ್ಯತೆಯಿಂದ ಕೂಡಿದ ದೇಶವಾಗಿದ್ದು, ದೇಶದಲ್ಲಿ ಏಕತೆ ಇದೆ. ಇದನ್ನು ಮತ್ತೆ ಮುನ್ನೆಲೆಗೆ ತೆಗೆದುಕೊಂಡು ಹೋಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಸಾಹಿತಿ ವೀರ ಹನುಮಾನ ಮಾತನಾಡಿ, ಒಂದು ದೇಶ ಶ್ರೀಮಂತಿಕೆ ಆಗಿದ್ದರೆ ಅದು ಸಂಸ್ಕೃತಿಯಿಂದ ಮಾತ್ರ ಸಾಧ್ಯ, ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಕಾರ್ಯಕ್ರಮದ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದರು.
ಡೊಳ್ಳು ಕುಣಿತ, ಬಯಲಾಟ, ಗೀಗೀಪದ, ಸೋಬಾನಪದ, ಹಗಲುವೇಷ, ಬರ?ರಕಥೆ, ಜಾನಪದ ಹಾಡುಗಳನ್ನು ಆಡುತ್ತಾ, ಜೊತೆ ಜೊತೆಗೆ ಹಳ್ಳಿಯಲ್ಲಿ ಕೆಲಸ ಮಡುತ್ತಾ ಇರುತ್ತಾರೆ. ನಮ್ಮ ಜಾನಪದ ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ಹಬ್ಬಿದೆ.
ತರಬೇತಿ ನೀಡಿದ ಗುರುಗಳಿಗೆ ಸನ್ಮಾನ: ಇದೇ ವೇಳೆ ತರಬೇತಿ ನೀಡಿದ ಗುರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಯಲಾಟ ಕಲೆಯ ಮಾನವಿ ತಾಲೂಕಿನ ತಡಕಲ್ ಗ್ರಾಮದ ರಂಗಪ್ಪ ಮಾಸ್ತರ್, ಹಗಲುವೇಷ ಕಲೆಯ ಸಿಂಧನೂರಿನ ಚಿನ್ನಪ್ಪ ಯಾಪಲಪರ್ವಿ, ಗೀ ಗೀ ಪದ ಕಲಾವಿದ ದೇವಸುಗೂರಿನ ಡಾ.ಪ್ರಕಾಶಯ್ಯ ನಂದಿ, ಬರ?ರಕಥೆಯ ಶಾಂತಮ್ಮ ಬರ?ರಕೆ ಹಾಗೂ ಸೋಬಾನೆಪದದ ಮುದಿಹನುಮಮ್ಮ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಶಿಬಿರದ ಮೇಲ್ವಿಚಾರಕರಾದ ಜೆ.ಎಂ ವಿರೇಶ, ಅಯ್ಯಪ್ಪ ಮ್ಯಾಕಲ್ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಇನ್ನಿತರರು ಭಾಗವಹಿಸಿದ್ದರು.