ವಿಶಾಲ ಎಪಿಎಂಸಿ ಪ್ರಾಂಗಣ ನಿರ್ಮಾಣಕ್ಕೆ ಧನ್ನೂರ್ ಒತ್ತಾಯ

ಬೀದರ:ನ.19: ನಗರದಲ್ಲಿ ವಿಶಾಲವಾದ ಹೊಸ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯ ಪ್ರಾಂಗಣ ನಿರ್ಮಿಸಬೇಕು ಎಂದು ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ ಒತ್ತಾಯಿಸಿದರು.
ದೀಪಾವಳಿ ಪ್ರಯುಕ್ತ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಇಲ್ಲಿಯ ಗಾಂಧಿಗಂಜ್‍ನ ಉದ್ಯಮಿ ಮಚ್ಚೇಂದ್ರನಾಥ ಜಮಾದಾರ್ ಅವರ ಮಾಲೀಕತ್ವದ ತಿರುಮಲಾ ಟ್ರೇಡಿಂಗ್ ಆ್ಯಂಡ್ ಕಂಪನಿಯ ಅಂಗಡಿಯಲ್ಲಿ ಬುಧವಾರ ಆಯೋಜಿಸಿದ್ದ ಮುಹೂರ್ತ ವ್ಯಾಪಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸದ್ಯ ಇರುವ ಪ್ರಾಂಗಣ ಕಿರಿದಾಗಿರುವ ಕಾರಣ ವಾಹನಗಳ ಸಂಚಾರ, ನಿಲುಗಡೆ, ಆಹಾರಧಾನ್ಯ ಖರೀದಿ, ಮಾರಾಟ, ಶುದ್ಧೀಕರಣ ಮೊದಲಾದ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ರೈತರು ಹಾಗೂ ವ್ಯಾಪಾರಿಗಳ ಅನುಕೂಲಕ್ಕಾಗಿ ನಗರ ಪ್ರದೇಶ ವ್ಯಾಪ್ತಿಯಲ್ಲೇ ಕನಿಷ್ಠ 100 ಎಕರೆ ಪ್ರದೇಶದಲ್ಲಿ ಹೊಸ ಪ್ರಾಂಗಣ ನಿರ್ಮಿಸುವ ಅಗತ್ಯ ಇದೆ. ಅಸೋಸಿಯೇಶನ್ ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ಪತ್ರವನ್ನೂ ಸಲ್ಲಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಭಗವಂತ ಖೂಬಾ ಮಾತನಾಡಿ, ಕೇಂದ್ರ ಸರ್ಕಾರ ರೈತರ ಹಾಗೂ ವ್ಯಾಪಾರಿಗಳ ಹಿತದೃಷ್ಟಿಯಿಂದ ಅನೇಕ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಎಪಿಎಂಸಿ ವ್ಯವಸ್ಥೆ ಯಥಾವತ್ತಾಗಿ ಮುಂದುವರಿಯಲಿದೆ. ಹೀಗಾಗಿ ವ್ಯಾಪಾರಿಗಳು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರು ಮನುಕುಲಕ್ಕೆ ಕಾಯಕವೇ ಕೈಲಾಸ ಎನ್ನುವ ಮಂತ್ರ ನೀಡಿದ್ದಾರೆ. ಕಾಯಕ ಯಾವುದೇ ಆಗಿದ್ದರೂ ಪರಮಾತ್ಮ ಹಾಗೂ ಸಮಾಜ ಸೇವೆಯ ಭಾವದಿಂದ ಮಾಡಿದ್ದಲ್ಲಿ ಅದರಲ್ಲಿ ಖಂಡಿತ ಯಶಸ್ಸು ದೊರಕುತ್ತದೆ ಎಂದರು.
ಎಪಿಎಂಸಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ, ಕಾರ್ಯದರ್ಶಿ ಶಿವಶರಣಪ್ಪ ಮಜಗೆ, ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಅಣ್ಣಾರಾವ್ ಮೊಗಶೆಟ್ಟಿ, ಕಾರ್ಯದರ್ಶಿ ಭಗವಂತ ಔದತಪುರ, ಕೋಶಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ, ಉದ್ಯಮಿಗಳಾದ ಅಶೋಕ ರೇಜಂತಲ್, ಮಚ್ಚೇಂದ್ರನಾಥ ಜಮಾದಾರ್ ಇದ್ದರು. ಸುರೇಶ ಸ್ವಾಮಿ ನಿರೂಪಿಸಿದರು. ವ್ಯಾಪಾರಿಗಳು, ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.