ವಿವೇಕ ಯೋಜನೆ: ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ


ಬ್ಯಾಡಗಿ,ನ.15: ಸ್ವಾಮಿ ವಿವೇಕಾನಂದ ಅವರ ಹೆಸರಿನಲ್ಲಿ ವಿವೇಕ ಯೋಜನೆಯಡಿ ರಾಜ್ಯದಾದ್ಯಂತ ಬಿಜೆಪಿ ಸರ್ಕಾರ ಐತಿಹಾಸಿಕ ಮಟ್ಟದಲ್ಲಿ ಶಾಲಾ ಕೊಠಡಿ ನಿರ್ಮಾಣ ಮಾಡುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ಮೂಡಿಸುವ ಮಹತ್ಕಾರ್ಯಕ್ಕೆ ಹೆಜ್ಜೆಯನ್ನು ಇಟ್ಟಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಪಂಚಾಯತರಾಜ್ ತಾಂತ್ರಿಕ ಉಪವಿಭಾಗದ ವತಿಯಿಂದ ವಿವೇಕ್ ಯೋಜನೆಯಡಿ 27.80ಲಕ್ಷ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಎರಡು ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜ್ಞಾನದ ಪ್ರತೀಕವಾಗಿರುವ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಈ ವರ್ಷ ಎಂಟು ಸಾವಿರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿರುವುದು ಐತಿಹಾಸಿಕ ಸಾಧನೆಯಾಗಿದೆ. ಹಿಂದಿನ ಯಾವುದೇ ಸರ್ಕಾರಗಳು ಇಷ್ಟೊಂದು ಪ್ರಮಾಣದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿಲ್ಲ. ಆದರೆ ಬಿಜೆಪಿ ಸರ್ಕಾರ ಶೈಕ್ಷಣಿಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಾವಿರಾರು ಕೋಟಿಗಳನ್ನು ನೀಡುವ ಮೂಲಕ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ನಾಗರಾಜ ಕೊರ್ಲಿ, ಎಸ್’ಡಿಎಂಸಿ ಅಧ್ಯಕ್ಷ ನಾಗರಾಜ ಬನ್ನಿಹಟ್ಟಿ, ಮುಖಂಡರಾದ ಶಿವಣ್ಣ ಕುಮ್ಯೂರ, ಎಸ್.ಎನ್.ಯಮುನಕ್ಕನವರ, ಬಸನಗೌಡ ಸಣ್ಣಗೌಡ್ರ, ಉಳಿವೆಪ್ಪ ಬನ್ನಿಹಟ್ಟಿ, ಹನಮಂತಗೌಡ್ರ ಸಣ್ಣಗೌಡ್ರ, ಲಿಂಗರಾಜ ಗಡ್ಡದವರ, ಶಿವರಾಜ ಬನ್ನಿಹಟ್ಟಿ, ಸೋಮಪ್ಪ ಕಳಪ್ಪನವರ, ಮುನ್ನಾ ಮಾಳಗಿಮನಿ, ಎಇಇ ಡಿ.ಎಲ್.ಕಲ್ಲೊಳ್ಳರ, ಬಿಇಓ ಐ.ಬಿ.ಬೆನಕಪ್ಪ, ಇಂಜನೀಯರ್ ವೈ.ಕೆ.ಮಟಗಾರ, ಮುಖ್ಯಶಿಕ್ಷಕಿ ಪುಷ್ಪಲತಾ ಹಾಗೂ ಸಹ ಶಿಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.