ವಿವೇಕ್ ಗೌಡ ಅವರ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟನೆ

ಮಂಗಳೂರು, ಎ.೧೯- ಯುವ ಛಾಯಾಚಿತ್ರಗ್ರಾಹಕ ವಿವೇಕ್ ಗೌಡ ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ಛಾಯಾಚಿತ್ರ ಅನಾವರಣಗೊಳಿಸುವುದರೊಂದಿಗೆ ೨೦೨೧ ರ ಏಪ್ರಿಲ್ ೧೭ ರ ಶನಿವಾರ ಸಂಜೆ ೫:೩೦ ಗಂಟೆಗೆ ಖ್ಯಾತ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್ ಉಡುಪಿ, ಭರತನಾಟ್ಯ ಕಲಾವಿದೆ ವಾಣಿ ರಾಜಗೋಪಾಲ್ (ಕಲಾಕ್ಷೇತ್ರ, ಚೆನ್ನೈ) ಮತ್ತು ಕವಿ, ಗೀತರಚನೆಕಾರ ಮತ್ತು ಆರ್ಸೊ ಕೊಂಕಣಿ ಮಾಸಿಕ ಪತ್ರಿಕೆಯ ಸಂಪಾದಕ ವಿಲ್ಸನ್ ಕಟೀಲ್ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.
ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಚ್) ನ ಮಂಗಳೂರು ಶಾಖೆಯು ಛಾಯಾಚಿತ್ರಗಳ ಪ್ರದರ್ಶನವನ್ನು ಮಂಗಳೂರು ಬಲ್ಲಾಳ್ ಭಾಗ್ ನ ಕೊಡಿಯಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸುತ್ತಿದೆ. ಪ್ರದರ್ಶನವು ೨೧೨೧ ರ ಏಪ್ರಿಲ್ ೨೧ ರವರೆಗೆ ಬೆಳಿಗ್ಗೆ ೧೧ ರಿಂದ ಸಂಜೆ ೭ ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರವೇಶ ಉಚಿತ.
ಸಭೆಯನ್ನುದ್ದೇಶಿಸಿ ಮಾತನಾಡಿದ ಗುರುದುತ್ ಕಾಮತ್, ಛಾಯಾಗ್ರಹಣವು ಕಲಾವಿದರಿಗೆ ಗರಿಷ್ಠ ಸಂತೋಷವನ್ನು ನೀಡುವ ಒಂದು ಕಲೆ ಎಂದು ಹೇಳಿದರು. “ಛಾಯಾಚಿತ್ರಗಳು ಅಸಾಧಾರಣ ಕ್ಷಣಗಳನ್ನು ಶಾಶ್ವತವಾಗಿ ಸೆರೆಹಿಡಿಯುತ್ತವೆ. ಅವು ಛಾಯಾಗ್ರಾಹಕನ ವಿಶಿಷ್ಟ ದೃಷ್ಟಿಕೋನವನ್ನು ಬಿಂಬಿಸುತ್ತವೆ. ಮನಸ್ಸು, ಹೃದಯ ಮತ್ತು ಕಣ್ಣು, ಈ ಮೂರೂ ಉತ್ತಮ ಛಾಯಾಗ್ರಾಹಕರಾಗಲು ಅಗತ್ಯವಿದೆ. ಹೃದಯ ನೋಡುತ್ತದೆ, ಮನಸ್ಸು ಹೇಳುತ್ತದೆ ಮತ್ತು ಕಣ್ಣು ಛಾಯಾಚಿತ್ರದ ಚೌಕಟ್ಟನ್ನು ನಿರ್ಮಿಸುತ್ತದೆ. ಆಂತರಿಕ ಧ್ವನಿಯನ್ನು ಕೇಳಿದಾಗ ಮಾತ್ರ ನಾವು ನಿರ್ಣಾಯಕ ಕ್ಷಣವನ್ನು ಸೆರೆಹಿಡಿಯಬಹುದು,” ಎಂದು ಅವರು ಹೇಳಿದರು.
ಭರತನಾಟ್ಯ ಕಲಾವಿದೆ ವಾಣಿ ರಾಜಗೋಪಾಲ್ ಅವರು ಯುವ ಛಾಯಾಚಿತ್ರಗ್ರಾಹಕ ವಿವೇಕ್ ಗೌಡ ಅವರ ಕಲೆಯ ಮೇಲಿನ ಬದ್ಧತೆಯನ್ನು ಶ್ಲಾಘಿಸಿದರು. ವಿಲ್ಸನ್ ಕಟೀಲ್ ಚಿತ್ರಗಳನ್ನು ದೃಶ್ಯ ಕಾವ್ಯ ಎಂದು ಬಣ್ಣಿಸಿದರು. “ಛಾಯಾಚಿತ್ರಗ್ರಾಹಕ ದ್ರಶ್ಯದಲ್ಲಿರುವ ಧ್ವನಿಯನ್ನು ನೋಡುತ್ತಾನೆ,” ಅವರು ಹೇಳಿದರು. ಇಂಟಾಚ್, ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಷ್ ಬಸು ಅವರು ಇಂಟಾಚ್ ಸಂಸ್ಥೆಯ ಪರಿಚಯ ಮಾಡಿದರು. ನಿಕಿತಾ ಜಿ. ಕುಟಿನ್ಹೋ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಪ್ರದರ್ಶನವು ಮಂಗಳೂರು ಹಾರ್ಸ್ ರೈಡಿಂಗ್ ಅಕಾಡೆಮಿ, ಬ್ಲಿಂಕ್ ಫಿಲ್ಮ್ಸ್, ಕ್ರಾಫ್ಟ್ ಝಿಲ್ಲಾ ಮತ್ತು ಆರ್ಟ್ ಕೆನರಾ ಟ್ರಸ್ಟ್ ಸಂಸ್ಥೆಗಳ ಬೆಂಬಲ
ದೊಂದಿಗೆ ಆಯೋಜಿಸಲಾಗಿದೆ.