ವಿವೇಕಾನಂದರ ಜೀವನ ಸಂದೇಶ ಯುವಕರಿಗೆ ಆದರ್ಶವಾಗಲಿ : ಬಿಇಓ ಬಸವರಾಜ ತಳವಾರ

ಅಥಣಿ :ಜ.18: ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷ ಮಾತ್ರ, ಆದರೆ ಅವರ ಜೀವಮಾನದ ಸಮಸ್ತ ಕಾರ್ಯಗಳನ್ನು ಈ ಅಲ್ಪಾವಧಿಯಲ್ಲಿಯೇ ಮುಗಿಸಿದರು. ವಿದೇಶದಲ್ಲಿ ಭಾರತೀಯ ಸಂಸ್ಕøತಿಯನ್ನು ಪ್ರಸಾರ ಮಾಡುವ ಮೂಲಕ ಭಾರತಕ್ಕಾಗಿಯೇ ತಮ್ಮ ಜೀವನವನ್ನು ಸವಿಸಿದರು. ಅವರ ತ್ಯಾಗ ಮತ್ತು ಪರಿಶ್ರಮ ಇಂದಿನ ಯುವ ಜನಾಂಗಕ್ಕೆ ಆದರ್ಶವಾಗಬೇಕು ಎಂದು ಅಥಣಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.
ಅವರು ಪಟ್ಟಣದ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಉತ್ಸವ ಮತ್ತು ಮಕ್ಕಳ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಕೇವಲ ಹಿಂದು ಧರ್ಮದ ಪ್ರತಿಪಾದಕರಷ್ಟೇ ಆಗಿರಲಿಲ್ಲ, ಅವರು ಸಮಸ್ತ ಭಾರತವನ್ನು ಎಲ್ಲ ಧರ್ಮದ ಸಮನ್ವಯದಡಿಯಲ್ಲಿ ಬೆಳಗಿಸಬೇಕೆಂಬ ಉದಾತ್ತ ದೃಷ್ಟಿಕೋನ ಹೊಂದಿದ್ದರು. ಅವರ ಸಂದೇಶಗಳು ಯುವಕರಿಗೆ ಸ್ಪೂರ್ತಿದಾಯಕವಾಗಬೇಕು, ಭವ್ಯ ಭಾರತ ನಿರ್ಮಾಣಕ್ಕೆ ನಮ್ಮ ಯುವಶಕ್ತಿ ಪಣತೊಡಬೇಕು ಎಂಬ ಉದ್ದೇಶದಿಂದ ಸರ್ಕಾರ ಅವರ ಜಯಂತಿಯನ್ನು ರಾಷ್ಟ್ರೀಯ ಯುವಕರ ದಿನವನ್ನಾಗಿ ಆಚರಿಸುತ್ತದೆ. ನಮ್ಮ ಯುವಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಾಮಿ ವಿವೇಕಾನಂದರ, ಬುದ್ಧ,ಬಸವ, ಅಂಬೇಡ್ಕರ್ ರಂತಹ ಮಹಾತ್ಮರ ಜೀವನ ಚರಿತ್ರೆಯನ್ನು ಅರಿತುಕೊಂಡು ಬದುಕನ್ನ ಆದರ್ಶಮಯ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಾಲಕರು ತಮ್ಮ ಶ್ರೀಮಂತಿಕೆಯ ಅಮಲಿನಲ್ಲಿ ಮಕ್ಕಳನ್ನ ಬೆಳೆಸುವಬಾರದು. ಅವರಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು, ಮಹಾತ್ಮರ ಮತ್ತು ಸಾಧಕರ ಚರಿತ್ರೆ, ನೈತಿಕತೆ ಮತ್ತು ದೇಶಪ್ರೇಮವನ್ನು ಬೆಳೆಸಬೇಕು. ವಿದ್ಯಾರ್ಥಿಗಳು ಕೂಡ ಹೆತ್ತ ತಂದೆ ತಾಯಿಯ ಋಣವನ್ನು, ಶಿಕ್ಷಣ ನೀಡಿದ ಶಾಲೆ ಮತ್ತು ಶಿಕ್ಷಕರ ಋಣವನ್ನು, ನಮಗೆ ಆದರ್ಶ ಬದುಕು ನೀಡಿದ ಈ ದೇಶದ ಋಣವನ್ನ ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯ ಕಾರ್ಯದರ್ಶಿ ಲಲಿತಾ ಮೇ ಕನಮರಡಿ ಮಾತನಾಡಿ ಬುದ್ಧ, ಬಸವ ಅಂಬೇಡ್ಕರ್ ಅವರಂತೆ ಸ್ವಾಮಿ ವಿವೇಕಾನಂದರು ಭಾರತೀಯ ಆಧ್ಯಾತ್ಮ ಸಂಸ್ಕೃತಿಯನ್ನು ದೇಶ ವಿದೇಶಗಳಿಗೆ ತಿಳಿಸಿಕೊಟ್ಟಿದ್ದಾರೆ. ಅವರ ಜೀವನದ ತತ್ವ ಆದರ್ಶಗಳು ನಮ್ಮೆಲ್ಲರಿಗೆ ಸ್ಪೂರ್ತಿಯಾಗಿವೆ ಎಂದು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳುಸಿದ್ದ ಮಹಾಸ್ವಾಮಿಗಳು ಮಾತನಾಡಿ ಸ್ವಾಮಿ ವಿವೇಕಾನಂದರ ಸರಳ ಬದುಕು, ಉತ್ಕೃಷ್ಟವಾದ ವಿಚಾರಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಡಿ ಡಿ ಮೇಕನಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಸಂತೋಷ ಬೊಮ್ಮಣ್ಣನವರ, ಸಮಾಜಸೇವಕರಾದ ಶ್ರೀಶೈಲ ಬಿರಾದಾರ, ಸುರೇಶ ನಂದಿಗೌಡರ, ರಫೀಕ್ ಪಟೇಲ, ಇನ್ನಿತರರು ಉಪಸ್ಥಿತರಿದ್ದರು. ಪ್ರಶಾಂತ ಮುನ್ನೋಳಿ ಸ್ವಾಗತಿಸಿದರು, ಎಸ್ ಕೆ ಪಾಟೀಲ ನಿರೂಪಿಸಿದರು. ಪ್ರವೀಣ ನಾಗನೂರ ವಂದಿಸಿದರು.