ವಿವೇಕಾನಂದರ ಚಿಂತನೆಗಳು ಎಂದಿಗೂ ಪ್ರಸ್ತುತ

ದಾವಣಗೆರೆ. ಜ.೧೬;ವಿವೇಕಾನಂದರು ಶಿಕ್ಷಣವು ಪ್ರಜ್ಞೆ, ವಿವೇಕ ಹಾಗೂ ವಿವೇಚನೆಯಿಂದ ಜೀವನ  ರೂಪಿಸಿಕೊಳ್ಳುವ ಪ್ರೇರಣೆ ನೀಡಬೇಕು ಎಂದು ಕರೆ ನೀಡಿದ್ದರು. ಅಂತಹ ಶಿಕ್ಷಣದಿಂದ ಯಶಸ್ಸು ತಂತಾನೇ ಹಿಂಬಾಲಿಸುತ್ತದೆ. ಬದುಕು ಉಜ್ವಲವಾಗುತ್ತದೆ ಎಂಬುದು ಅವರ ಸಂದೇಶವಾಗಿತ್ತು ಎಂದು ಮುಖ್ಯೋಪಾಧ್ಯಾಯ ಎಸ್ ಶಶಿಧರ್ ವಿವೇಕಾನಂದರ ಚಿಂತನೆಗಳನ್ನು ಸ್ಮರಿಸಿದರು. ಮಲೇಬೆನ್ನೂರು ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರದ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ವಿವೇಕಾನಂದ ಜಯಂತಿ ಸ್ಮರಣಾರ್ಥ ಆಯೋಜಿಸಲಾಗಿದ್ದ ” ಯುವ ದಿನೋತ್ಸವ ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಓದಿ ವಿದ್ಯಾವಂತರಾಗುವ ಜೊತೆ ಸತ್ಪ್ರಜೆಗಳಾಗಿ  ಬಾಳುವುದೇ ನಿಜವಾದ ಶಿಕ್ಷಣ. ವಿವೇಕಾನಂದರು ಈ ಶಿಕ್ಷಣದ ಮಹತ್ವವನ್ನು ದೇಶ ವಿದೇಶಗಳಲ್ಲಿ ಸಾರಿದ್ದರು. ಅವರ ನುಡಿಗಳು ಎಂದಿಗೂ ಪ್ರಸ್ತುತ ಎಂದು ಸ್ಮರಿಸಿದರು.