ವಿವೇಕಾನಂದರ ಆದರ್ಶಗಳು ಸರ್ವಕಾಲಿಕ

ದಾವಣಗೆರೆ. ಜ.೧೨; ವಿವೇಕಾನಂದರ ಆದರ್ಶಗಳು ಸರ್ವಕಾಲಿಕ. ಯುವಸಮೂಹ ಅವರ ಸಿದ್ದಾಂತಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ನಾಯಕ ಹೇಳಿದರು.ಇಲ್ಲಿನ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಎ ಆರ್ ಎಂ ಕಾಲೇಜಿನಲ್ಲಿಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಭವಿಷ್ಯ ವಿದ್ಯಾರ್ಥಿಗಳು ಆದ್ದರಿಂದ ಉತ್ತಮ ಆರೋಗ್ಯ ಹಾಗೂ ಸುಶಿಕ್ಷಿತ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.ಉತ್ತಮ ರಾಷ್ಟ್ರ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.ಇಂದಿನ ಯುವಕರು ವಿವೇಕಾನಂದರ ಜೀವನ ಚರಿತ್ರೆ ಅಭ್ಯಾಸ ಮಾಡುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಬೇಕು.ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ ವಿವೇಕಾನಂದರ ಜೀವನವೇ ಒಂದು ಸಂದೇಶವಾಗಿದೆ.ನಾವು ಹೆಚ್ಚು ಮಾತನಾಡುವುದಕ್ಕಿಂತ ಅವರ ಆದರ್ಶಗಳನ್ನು  ಆಚರಣೆಗೆ ತರಬೇಕು.ಇಂದಿನ ಯುವಕರು ಅನೇಕ ವ್ಯಸನಗಳಿಗೆ ಬಲಿಯಾಗುವ ಮೂಲಕ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದು ದುರಂತ.ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ ಎಂದರು.ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಹೆಚ್ಚು ಉಲ್ಲಂಘಿಸುತ್ತಿರುವುದು ಕಂಡುಬರುತ್ತಿದೆ.ಸುಪ್ರೀಂಕೋರ್ಟ್ ನ ನಿರ್ದೇಶನದ ಮೇರೆಗೆ ಒಂದು ತಿಂಗಳ ಕಾಲ ಸಂಚಾರಿ ಸುರಕ್ಷ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದರು.ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯರಾದ ಎಲ್.ಹೆಚ್ ಅರುಣ್ ಕುಮಾರ್ ಮಾತನಾಡಿ ಜಾತಿ,ಧರ್ಮ, ಭಾಷೆ ಎಲ್ಲವನ್ನೂ ಮೀರಿ ಮನುಷ್ಯರನ್ನು ಪ್ರೀತಿಸುವುದನ್ನು ಮೊದಲ ಬಾರಿಗೆ ವಿವೇಕಾನಂದರು ಪ್ರತಿಪಾದಿಸಿದರು. ಎಲ್ಲಾ ದೌರ್ಬಲ್ಯಗಳನ್ನು ಮೀರಿ ಸದೃಢ ಸಮಾಜ ನಿರ್ಮಿಸಬಹುದು ಎಂಬುದನ್ನು ತೋರಿಸಿಕೊಟ್ಟ ಮೊದಲ ಸಂತ ವಿವೇಕಾನಂದರು ಎಂದರು.ಈ ವೇಳೆ ಪ್ರೊ.ಡಿ.ಹೆಚ್ ಪ್ಯಾಟಿ,ಎನ್.ಟಿ ಮಂಜುನಾಥ್, ಪ್ರೊ.ಅಂಜಿನಪ್ಪ,ಪ್ರೊ.ಅಣ್ಣಯ್ಯ,ಪ್ರೊ.ಕಾಡಜ್ಜಿ ಇದ್ದರು.