ವಿವೇಕಾನಂದರು ಭಾರತದ ಆಧ್ಯಾತ್ಮಿಕಜ್ಯೋತಿ-ತುರಮರಿ

ಧಾರವಾಡ ಜ.13-: ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕಜ್ಯೋತಿ, ಮಹಾನ್ ದೇಶಭಕ್ತ ಸಂತರು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪದ ಸಂಚಾಲಕ ಸತೀತ ತುರಮರಿ ಹೇಳಿದರು.
ಅವರು ಚರಂತಿಮಠ ಗಾರ್ಡನ್‍ದ ಬನಶಂಕರಿ ಭವನದ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿವೇಕಾನಂದರು ಶತಮಾನದ ನಂತರವೂ ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ,ಏಳಿಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎಂಬ ಅವರ ಸಂದೇಶ ಭಾರತದ ಯುವಶಕ್ತಿಗೆ ಪ್ರೇರಕ ಶಕ್ತಿಯಾಯಿತು. ಯುವಕರು ದೌರ್ಬಲ್ಯ, ಕೀಳರಿಮೆ ಹೊಂದದೇ ಬಲಶಾಲಿಗಳಾಗಿ ಮಾತೃಭೂಮಿಯ ಸೇವೆಗೆ ಸಿದ್ಧರಾಗಲು ತಿಳಿಸಿ ಅವರ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.
ಭಾರತ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೀರಣ್ಣ ಒಡ್ಡೀನ ಉಪನ್ಯಾಸ ನೀಡಿ, ವಿವೇಕಾನಂದರು ಭಾರತದ ಕೋಟ್ಯಾಂತರ ಬಡವರ ದುಸ್ಥಿತಿ ಕಂಡು ಮರುಗಿದ ಬಡವರ ಪಾಲಿನ ಮಹಾ ಕರುಣಾನಿಧಿ. ಧೀನದಲಿತರ ಸೇವೆ ತಮ್ಮ ಬದುಕಿನ ಪರಮ ಗುರಿ ಎಂದು ಸಾರಿದರು. ಚಿಕ್ಯಾಗೊದಲ್ಲಿ ಜರುಗಿದ ವಿಶ್ವಸಮ್ಮೇಳನದಲ್ಲಿ ಭಾರತದ ಸನಾತನ ಧರ್ಮ ಹಾಗೂ ಸಂಸ್ಕøತಿ ಇಡೀ ಜಗತ್ತಿಗೆ ಸಾರಿದ ಆಧ್ಯಾತ್ಮಕೇಸರಿ, ಭಾರತವು ನನ್ನ ಪುಣ್ಯಭೂಮಿ, ಭಾರತಾಂಬೆ ನನ್ನ ತಾಯಿ ಅಲ್ಲಿಯ ನೀರು, ಗಾಳಿ ನನಗೆ ಪರಮ ಪವಿತ್ರ ಎಂಬ ಸಂದೇಶ ನೀಡಿ ತಮ್ಮ ಉತ್ಕಟ ದೇಶಾಭಿಮಾನ ತೋರಿಸಿದವರು, ಅವರ ಬಗ್ಗೆ ತಿಳಿಯುವುದೆಂದರೆ ಪವಿತ್ರ ಗಂಗೆಯಲ್ಲಿ ಮಿಂದೆದ್ದು ಪಾವನವಾದಂತೆ ಎಂದರು.
ಎಚ್. ಎ. ಮುಲ್ಲಾನವರ ಮಾತನಾಡಿ, ವಿವೇಕಾನಂದರು ಜಾತೀಯತೆ, ಬೂಟಾಟಿಕೆಯನ್ನು ಖಂಡಿಸಿ ಸರ್ವಧರ್ಮ ಸಮನ್ವಯತೆ, ಸಮಾನತೆ ಬೋಧಿಸಿದ ಪುಣ್ಯಪುರುಷರು. ಬಡವರ ಸೇವೆ ದೇವರ ಸೇವೆ ಎಂದು ಸಾರಿದ ವೀರಸನ್ಯಾಸಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬನಶಂಕರಿ ಭವನದ ಅಧ್ಯಕ್ಷ ಶಿವಾನಂದ ಲೋಲೆನ್ನವರ ಮಾತನಾಡಿ, ವಿವೇಕಾನಂದರು ಅಂದು ಹಚ್ಚಿದ ವೇದಾಂತ ದೀಪ ಇನ್ನೂ ಜಗತ್ತಿನಲ್ಲಿ ಪ್ರಜ್ವಲಿಸುತ್ತಿದೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವೂ ಸಾಗಬೇಕು, ರಾಮಕೃಷ್ಣ ಮಿಶನ್ ಮೂಲಕ ಅನೇಕ ಸೇವಾ ಕಾರ್ಯ ಮಾಡಿದ ಮಹಾನ್ ತತ್ವಜ್ಞಾನಿ ಎಂದರು.
ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಶಿಕ್ಷಕ ಎಂ. ಐ. ದೀವಟಗಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಂ. ಜಿ. ಮುರುಗೋಡ, ಎಂ.ಎ. ಮುಜಾಹಿದ್, ಪ್ರೇಮಾಭಟ್ ಸೇರಿದಂತೆ ಅನೇಕರು ಇದ್ದರು.