ವಿವೇಕಾನಂದರು ದೇಶದ ಯುವಕರಿಗೆ ಸ್ಪೂರ್ತಿ : ಚನ್ನಬಸಯ್ಯಾ ಇಟ್ನಾಳಮಠ

ಅಥಣಿ :ಜ.14: ಸ್ವಾಮಿ ವಿವೇಕಾನಂದರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮ ಮೂಲಕ ಯುವಕರನ್ನು ಬಡಿದೆಬ್ಬಿಸಿ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಮಾಡಿರುವ ಕಾರ್ಯ ಮತ್ತು ಅವರ ತತ್ವ ಆದರ್ಶಗಳು ಇಂದಿನ ಯುವಕರಿಗೆ ಸ್ಪೂರ್ತಿಯಾಗಬೇಕು ಎಂದು ಹಿರಿಯ ಪತ್ರಕರ್ತ ಚನ್ನಬಸಯ್ಯಾ ಇಟ್ನಾಳಮಠ ಹೇಳಿದರು.
ಅವರು ಗುರುವಾರ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ವಿವೇಕಾನಂದರ 160ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರವೇ ತಾಲೂಕ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ಅವರಂತೆ ದೇಶಪ್ರೇಮದಲ್ಲಿ ವಿಶೇಷವಾಗಿ ಯುವಕರಲ್ಲಿ ದೇಶಾಭಿಮಾನ ತುಂಬಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು. ಅವರ ಬದುಕು ನಮ್ಮೆಲ್ಲರಿಗೆ ಸ್ಪೂರ್ತಿ. ನಾವು ಕೇವಲ ಒಂದು ದಿನ ಅವರ ಜಯಂತಿಯನ್ನ ಆಚರಣೆ ಮಾಡಿದರೆ ಸಾಲದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕೆಂದು ಕರೆ ನೀಡಿದರು.
ತಾಲೂಕ ವಿಸ್ತರಣಾಧಿಕಾರಿ ವೆಂಕಟೇಶ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಮಿ ವಿವೇಕಾನಂದರು ಸಾಗಿ ಬಂದ ಜೀವನವನ್ನು ತಿಳಿಸಿದರು. ಈ ವೇಳೆ ಅಶೋಕ ಸತ್ತಿಗೌಡರ, ಪರಶುರಾಮ ಮಾಳಗೊಂಡ, ಕೇದಾರಿ ಬಾಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.