ವಿವೇಕಾನಂದದಲ್ಲಿ ಶಾಲಾರಂಭಕ್ಕೆ ಸರಸ್ವತಿ ಪೂಜೆ

ಪುತ್ತೂರು, ಜ.೨- ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ ಬದಲಿಗೆ ವಿವೇಕ, ಪ್ರಜ್ಞೆ, ಬುದ್ದಿವಂತಿಕೆ, ಜ್ಞಾನ ತಿಳುವಳಿಕೆಗಳನ್ನು ಒಳಗೊಂಡಿದೆ. ವಿದ್ಯೆ, ಬುದ್ಧಿ, ಸಂಗೀತ ಮತ್ತು ಕಲೆ ಸಂಸ್ಕೃತಿಯ ಪ್ರತೀಕವಾಗಿರುವ ಸರಸ್ವತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪೂಜಿಸಬೇಕು ಎಂದು ಕಶೆಕೋಡಿ ಕಾರ್ತಿಕ್ ಶಾಸ್ತ್ರೀ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವದ ಅಂಗವಾಗಿ ಸರಸ್ವತಿ ಪೂಜಾ ಮತ್ತು ಗಣಹೋಮ ನಡೆಸಲಾಯಿತು.

ಯಾವುದೇ ಒಂದು ವಿದ್ಯಾಸಂಸ್ಥೆ ಅಥವಾ ವಿದ್ಯಾರ್ಥಿಯು ಬೆಳಗಬೇಕಾದರೆ ತನ್ನೊಳಗಿರುವ ಅಂತ:ಶಕ್ತಿಯನ್ನು ಪ್ರಕಟಪಡಿಸಬೇಕು. ಇದಕ್ಕೆ ವಿದ್ಯಾಧಿದೇವತೆಯಾದ ಸರಸ್ವತಿಯ ಪೂರ್ಣನುಗ್ರಹ ಅತ್ಯಗತ್ಯ. ಈ ದಿಶೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯವು ಮಾದರಿಯಾಗಿ ಪ್ರತಿವರ್ಷವು ಇಂತಹ ಜ್ಞಾನಾಭಿವೃದ್ಧಿ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ  ಸಂತೋಷ್ ಬಿ, ಸದಸ್ಯ ರವಿ ಮುಂಗ್ಲಿಮನೆ, ವತ್ಸಲಾ ರಾಜ್ಞಿ, ಪ್ರಾಂಶುಪಾಲ ಮಹೇಶ ನಿಟಿಲಪುರ ಭಾಗವಹಿಸಿದ್ದರು.