ವಿವೇಕವಾಣಿ ಅಳವಡಿಕೆಯಿಂದ ಸದೃಢ ದೇಶ ನಿರ್ಮಾಣ

ಕಲಬುರಗಿ:ಜ.12: ಯುವಕರು ಹೇಡಿಗಳಾಗಬಾರದು ಪುರುಷ ಸಿಂಹಗಳಾಗಬೇಕು, ನೀವು ಎಂದೂ ಪರಾವಲಂಬಿಗಳಾಗಬಾರದು, ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಪ್ರತಿಪಾದಿಸುತ್ತಿದ್ದ ಸ್ವಾಮಿ ವಿವೇಕಾನಂದರು, ಯುವಜನರಿಗೆ ನೀಡಿರುವ ಒಂದೊಂದು ಸಂದೇಶವೂ ಒಂದೊಂದು ಜೀವನಧರ್ಮವಾಗಿದೆ. ಹೀಗಾಗಿಯೇ ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ, ಅಕ್ಷರಶಃ ರೋಮಾಂಚನವಾಗುತ್ತದೆ. ಯುವಕರು ವಿವೇಕವಾಣಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದರೆ ಸದೃಢ ದೇಶ ನಿರ್ಮಾಣವಾಗಲು ಪೂರಕವಾಗುತ್ತದೆ ಎಂದು ವಿವೇಕಾನಂದ ಅನುಯಾಯಿ, ಪ್ರಖರ ವಾಗ್ಮಿ ಶಿವಕಾಂತ ಚಿಮ್ಮಾ ಮಾರ್ಮಿಕವಾಗಿ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಮುತ್ತಾ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಸ್ವಾಮಿ ವಿವೇಕಾನಂದರ 161ನೇ ಜನ್ಮದಿನಾಚರಣೆಯಾದ-ರಾಷ್ಟ್ರೀಯ ಯುವ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಅಲ್ಲಿನ ಯುವಕರ ಪಾತ್ರ ತುಂಬಾ ಪ್ರಮುಖವಾಗಿದೆ. ಇಡೀ ಯುವ ಸಮೂಹದ ಚೇತನಾ ಶಕ್ತಿಯಾದ ವಿವೇಕಾನಂದರು ನೀಡಿದ ಸಂದೇಶ ಜಗತ್ತಿಗೆ ಮಾದರಿಯಾಗಿದೆ. ಧರ್ಮಕ್ಕೆ ಹೊಷ ಭಾಷ್ಯವನ್ನು ಬರೆದವರು. ತತ್ವಜ್ಞಾನಿ, ದಾರ್ಶನಿಕ, ಮಾನವೀಯತೆಯೆ ಸಾಕಾರಮೂರ್ತಿ, ಯುವಕರ ಶಕ್ತ ಸಂಜೀವಿನಿಯಾಗಿದ್ದಾರೆ ಎಂದರು.
ಶ್ರೇಯಸ್ ಮತ್ತು ಸ್ವರಾಂಕ್ ಮಕ್ಕಳು ವಿವೇಕಾನಂದರ ವೇಷ ಧರಿಸಿ ಸಂಭ್ರಮಿಸಿದರು. ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಪ್ರಮುಖರಾದ ಚಂದ್ರಶೇಖರ ವೈ.ಶಿಲ್ಪಿ, ಶಿವಯೋಗೆಪ್ಪಾ ಎಸ್.ಬಿರಾದಾರ, ಲಕ್ಷ್ಮೀ ಇಂಡಿ, ಪ್ರಿಯಾಂಕಾ ವಾಲಿ, ಪ್ರಮೋದ ಕುಲರ್ಣಿ, ವಿಶ್ವನಾಥ ನಂದರ್ಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.