‘ವಿವೇಕ’ಕ್ಕೆ ಕೇಸರೀಕರಣ ಲೇಪ ಇಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಕಲಬುರಗಿ,ನ 14: ರಾಜ್ಯಾದ್ಯಂತ ವಿವೇಕ ಕಾರ್ಯಕ್ರಮದ ಅಡಿ 7601 ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸುತ್ತಿರುವುದರ ಹಿಂದೆ ಕೇಸರೀಕರಣದ ಯಾವುದೇ ಮಾತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಹೇಳಿದರು.
ತಾಲೂಕಿನ ಮಡಿಯಾಳ ತಾಂಡಾ ಬಳಿ ರಾಜ್ಯಾದ್ಯಂತ ರಾಜ್ಯ ಸರಕಾರದ ವತಿಯಿಂದ ಕೈಗೊಳ್ಳಲಾಗುತ್ತಿರುವ 7601 ಶಾಲಾ ಕೊಠಡಿಗಳ ರಾಜ್ಯಮಟ್ಟದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದಾಶಯದೊಂದಿಗೆ ವಿವೇಕ ಕಾರ್ಯಕ್ರಮದ ಅಡಿ ಗುಣಮಟ್ಟದ ಶಾಲಾ ಕಟ್ಟಡಗಳನ್ನು ಮುಂದಿನ ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು ಎಂದರು.
ವಿವೇಕ ಯೋಜನೆ ಅಡಿ ರಾಜ್ಯಾಧ್ಯಂತ 7601ಕ್ಕೂ ಅಧಿಕ ಶಾಲಾ ಕಟ್ಟಡ ನಿರ್ಮಿಸಲಾಗುತ್ತಿದೆ.ಈ ರೀತಿ ಮುಂದಿನ ಮೂರು ವರ್ಷ ನಿರಂತರವಾಗಿ ಶಾಲಾ ಕಟ್ಟಡ ನಿರ್ಮಿಸುವ ಮೂಲಕ ಕಟ್ಟಡ ಕೊರತೆ ನೀಗಿಸಲಾಗುವುದು ಎಂದು ನುಡಿದರು.
ವಿವೇಕ ಯೋಜನೆ ಸ್ವಾಮಿ ವಿವೇಕಾನಂದ ಅವರ ಹೆಸರಿನಲ್ಲಿ ಆರಂಭಿಸಲಾಗುತ್ತಿರುವ ಯೋಜನೆಯಾಗಿದ್ದು, ಇದರಲ್ಲಿ ಕಾಂಗ್ರೆಸ್ ವಿವಾದ ಹುಡುಕುತ್ತಿದೆ. ಎಲ್ಲದಕ್ಕೂ ವಿವಾದ ಮಾಡುವುದು ಕಾಂಗ್ರೆಸ್ ನವರಿಗೆ ಅಭ್ಯಾಸವಾಗಿದೆ ಎಂದು ಹೇಳಿದರು.
ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ ಅವರು,ನಮ್ಮ ರಾಷ್ಟ್ರ ಧ್ವಜದಲ್ಲಿಯೂ ಕೇಸರಿ ಬಣ್ಣ ಇದೆ. ಹಾಗಾಗಿ, ಕೇಸರಿ ಬಣ್ಣ ಕುರಿತು ಅನಗತ್ಯವಾಗಿ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದರು.
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಅವರು ಸಮಾರಂಭದ ಆರಂಭದಲ್ಲಿ ಮಾತನಾಡಿ, ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಬರಬೇಕು ಎಂದು ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದಾರೆ. ಹೀಗಿರುವಾಗ, ಶಾಲೆಯಲ್ಲಿ ಮಕ್ಕಳು ಧ್ಯಾನ ಮಾಡುವುದನ್ನು ವಿರೋಧಿಸುತ್ತಿರುವುದು ಅಚ್ಚರಿ ಮೂಡಿಸುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಐದು ವರ್ಷ ಅಧಿಕಾರ ನಡೆಸಿದಾಗ ಕೇವಲ 4510 ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಇನ್ನೊಂದೆಡೆ, ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆದಾಗ ಕೇವಲ ಎರಡು ವರ್ಷಗಳಲ್ಲಿ 8000 ಶಾಲಾ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಜೊತೆಗೆ, ಸಿಎಂ ಬೊಮ್ಮಾಯಿ ಅವರು ಇತ್ತೀಚೆಗೆ 15 ಸಾವಿರ ಶಿಕ್ಷಕರ ಭರ್ತಿಗೆ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ 2500 ಹೈಸ್ಕೂಲು ಶಿಕ್ಷಕರ ನೇಮಕಾತಿಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ನುಡಿದರು.
ಮಕ್ಕಳಲ್ಲಿ ವಿವೇಕದ ಜೊತೆಗೆ ವಿವೇಕಾನಂದರಂತೆ ಜ್ಞಾನ ಬೆಳೆಸಬೇಕೆಂಬ ಉದ್ದೇಶದಿಂದ ವಿವೇಕ ಯೋಜನೆ ರೂಪಿಸಲಾಗಿದೆ ಎಂದು ಸಚಿವ ನಾಗೇಶ್ ಹೇಳಿದರು.
ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಸಹಕಾರ ಸಚಿವ
ಎಸ್.ಟಿ.ಸೋಮಶೇಖರ್, ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್, ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ್ ರೇವೂರ್, ಸುಭಾಷ್ ಗುತ್ತೇದಾರ್, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಶಶಿಲ್ ನಮೋಶಿ, ಬಾಬುರಾವ್ ಚಿಂಚನ್ಸೂರ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು.
ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಲ್ಲಾ ಪಂಚಾಯತಿ ಸಿಇಒ ಡಾ.ಗಿರೀಶ್ ಬದೋಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಗರಿಮಾ ಪನ್ವಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.