ವಿವಿ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಮಂಗಳೂರು, ಜ.೧೩- ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಜನೋತ್ಸವದ ಪ್ರಯುಕ್ತ “ವ್ಯಕ್ತಿತ್ವ ನಿರ್ಮಾಣದಲ್ಲಿ ವಿವೇಕಾನಂದರ ಚಿಂತನೆಗಳು” ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ರವೀಂದ್ರ ಕಲಾಭವನ ದಲ್ಲಿ ಕೋವಿಡ್ ೧೯ ನಿಯಮಾವಳಿಗಳನ್ನು ಅನುಸರಿಸಿ ಹಾಗೂ ನೇರ ಪ್ರಸಾರವನ್ನು ಗೂಗಲ್ ಮೀಟ್ ಆನ್‌ಲೈನ್ ವೇದಿಕೆಯ ಮೂಲಕ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ, ಶ್ರೀ ನಾರಾಯಣ ಗುರು ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಕೇಶವ ಬಂಗೇರ ತಮ್ಮ ವಿಶೇಷ ಉಪನ್ಯಾಸದಲ್ಲಿ ಯುವ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳ ಮಹತ್ವ ಹಾಗೂ ಅವುಗಳ ಪ್ರಭಾವವನ್ನು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಆಪ್ತ ಸಮಾಲೋಚಕಿ ಮಮತ ಅಚಾರ್ ಮಾತನಾಡಿ, ವಿದ್ಯಾರ್ಥಿಗಳು ಪದವಿಗಳನ್ನು ಕಲಿಯುವುದರ ಜೊತೆಗೆ ಸ್ವಾಮಿ ವಿವೇಕಾನಂದರ ತತ್ವಗಳು, ಅವರಲ್ಲಿದ್ದ ಆತ್ಮ ವಿಶ್ವಾಸ, ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಬೆಳೆಸಬೇಕು. ಯುವ ದಿನಾಚರಣೆಯಂತಹ ಕಾರ್ಯಕ್ರಮಗಳು ಆತ್ಮಸ್ಥೈರ್ಯ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವಕರಿಗೆ ಸ್ಪೂರ್ತಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಸುಭಾಷಿಣಿ ಶ್ರೀವತ್ಸರವರು ವಿವೇಕಾನಂದರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಪ್ರತೀ ದಿನ ಶಕ್ತಿಯಾಗಿ ಬೆಳೆದು, ಸುಂದರ ಸಮಾಜವನ್ನು ಕಟ್ಟೋಣ ಎಂದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ವಿದ್ಯಾರ್ಥಿ ರಂಜಿತ್ ನಿರ್ವಹಿಸಿ, ಉಪನ್ಯಾಸಕ ವೆಂಕಟೇಶ್ ನಾಯಕ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಉಪನ್ಯಾಸಕಿ ಮಧುಶ್ರೀ ಜೆ. ಶ್ರೀಯಾನ್ ಸ್ವಾಗತಿಸಿ, ವಿದ್ಯಾರ್ಥಿ ತರುಣ್ ಬೋಳಾರ್ ವಂದಿಸಿ, ಉಪನ್ಯಾಸಕಿ ಕಾವ್ಯಾ ಪಿ. ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.